ಪತಿಯನ್ನು ಥಳಿಸಿ ಪತ್ನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಿರಾತಕ‌ ಗುಂಪು

ಕೊಪ್ಪಳ: ಪ್ರೇಮಿಸಿ ವಿವಾಹವಾಗಿದ್ದ ದಂಪತಿ ನಡುವಿನ ವೈಮನಸ್ಸು ಕಾಮುಕರಿಗೆ ದಾರಿ ಮಾಡಿಕೊಟ್ಟ ಹೇಯ ಘಟನೆ ಗಂಗಾವತಿಯಲ್ಲಿ ನಡೆದಿದೆ.

ನಶೆಯಲ್ಲಿದ್ದ ಕಿರಾತಕರ ಗುಂಪು ಪತಿಯನ್ನು ಥಳಿಸಿ ಪತ್ನಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಗಂಗಾವತಿ ಕೇಂದ್ರಿಯ ಬಸ್ ನಿಲ್ದಾಣದ ಸಮೀಪ ಉದ್ಯಾನವನದಲ್ಲಿ ನಡೆದಿದೆ.

ಬೆಂಗಳೂರಿನ ಗೊರಗುಂಟೆ ಪಾಳ್ಯದ 21 ವರ್ಷ ವಯಸ್ಸಿನ ಯುವತಿ, ಗಂಗಾವತಿ ತಾಲ್ಲೂಕಿನ ಸಿದ್ಧಾಪುರದ ಯುವಕನನ್ನು ಪ್ರೀತಿಸಿ ಮೂರು ತಿಂಗಳ ಹಿಂದೆ ಹುಲಿಗಿ ಗ್ರಾಮದ ದೇವಸ್ಥಾನದಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಆದರೆ ಪ್ರಾರಂಭದಲ್ಲೇ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದ್ದು,ಸಿಟ್ಟಿನಲ್ಲಿ ಪತಿ ತನ್ನ ಪತ್ನಿಯನ್ನು ಬಿಟ್ಟು ಬಂದಿದ್ದಾನೆ.

ಪತಿಯನ್ನು ಹುಡುಕಿಕೊಂಡು ಪತ್ನಿ ಶುಕ್ರವಾರ ತಡರಾತ್ರಿ ಗಂಗಾವತಿಯ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿದ್ದಾಳೆ.ಪತಿ ಕೂಡಾ ಪತ್ನಿಗಾಗಿ ಬಸ್ ನಿಲ್ದಾಣಕ್ಕೆ ಬಂದಿದ್ದಾನೆ.

ಅಲ್ಲೂ ಕೂಡಾ ಪತ್ನಿ ಪತಿಯೊಂದಿಗೆ ಜಗಳ ಪ್ರಾರಂಭಿಸಿದ್ದಾಳೆ. ಇದನ್ನು ಗಮನಿಸಿದ ಆರು ಜನರ ಗುಂಪು ಅಲ್ಲಿಗೆ ಆಗಮಿಸಿ,ಯಾರೋ ಯುವಕ ಚುಡಾಯಿಸುತ್ತಿದ್ದಾನೆ ಎಂದು ತಿಳಿದು ಪತಿಯ ಮೇಲೆ ಹಲ್ಲೆ ಮಾಡಿದ್ದಾರೆ.

ಆಗ ಮಹಿಳೆ, ಆತ ತನ್ನ ಪತಿ ಎಂದು ಕೂಗಿ ಹೇಳಿದರೂ ಕೇಳಿಸಿಕೊಳ್ಳದೆ ಯುವಕರು,  ಹಲ್ಲೆ ಮುಂದುವರಿಸಿದ್ದಾರೆ.

ಇದರಿಂದ ಗಾಬರಿಗೊಂಡ ಮಹಿಳೆ, ತನ್ನ ರಕ್ಷಣೆಗಾಗಿ ಸಮೀಪದ ಪಾರ್ಕ್ ಕಡೆ ಓಡಿದ್ದಾಳೆ,ಆದರೆ ಹಿಂಬಾಲಿಸಿಕೊಂಡು ಬಂದ ಕಾಮುಕರ ಗುಂಪು ಆಕೆಗೆ ಲೈಂಗಿಕ ಕಿರುಕುಳ ನೀಡಿದೆ.

ಈ ಪೈಕಿ ಒಬ್ಬ ಆಕೆಯನ್ನು ಅತ್ಯಾಚಾರ ಮಾಡಿದ್ದಾನೆ. ಅಷ್ಟರಲ್ಲಿ ಹಲ್ಲೆಗೊಳಗಾದ ಪತಿ, ಕೆಲ ಸ್ಥಳೀಯರು ಹಾಗೂ ಆಟೋ ರಿಕ್ಷಾ ಚಾಲಕರನ್ನು ಕರೆತಂದಿದ್ದಾನೆ,ಅಷ್ಟರಲ್ಲಾಗಲೇ ಗುಂಪು ಪರಾರಿಯಾಗಿತ್ತು.

ಲಿಂಗರಾಜ ಎಂಬ ಯುವಕ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಳಿದ ಆರೋಪಿಗಳು ಮೌಲಹುಸೇನ್, ಶಿವಕುಮಾರಸ್ವಾಮಿ, ಪ್ರಶಾಂತ, ಮಹೇಶ ಮತ್ತು ಮಾದೇಶ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.