ಚಾಮರಾಜನಗರ: ಪಾಕ್ ಪರ ಘೋಷಣೆ ಆರೋಪ ಹಿನ್ನಲೆಯಲ್ಲಿ ಬುಧವಾರ ಚಾಮರಾಜನಗರದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು.
ಚಾಮರಾಜನಗರದ ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಭುವನೇಶ್ವರಿ ವೃತ್ತದ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ನಾಸಿರ್ ಹುಸೇನ್, ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಈ ವೇಳೆ, ನಾಸಿರ್ ಹುಸೇನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಲು ಮುಂದಾದ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಭಾವಚಿತ್ರವನ್ನು ವಶಕ್ಕೆ ಪಡೆದರು.
ಪೊಲೀಸರ ಕ್ರಮಕ್ಕೆ ಗರಂ ಆದ ಬಿಜೆಪಿ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದರು.
ಕಾಂಗ್ರೆಸ್ ಕಚೇರಿ ಮುತ್ತಿಗೆ ಹಾಕಲು ತೆರಳುತ್ತಿದ್ದಂತೆ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಈ ವೇಳೆ, ದೊಡ್ಡ ಹೈಡ್ರಾಮವೇ ನಡೆದು ಪೊಲೀಸ್ ವಾಹನ ಮುಂದೆ ಬಿಜೆಪಿ ಮುಖಂಡರು ಮಲಗಿ ಕಿಡಿಕಾರಿದರು.
ಬಿಜೆಪಿ ಪ್ರತಿಭಟನೆ ನಡೆಸಿ ರಸ್ತೆ ತಡೆದಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.