ಉದಯನಿಧಿ ಸ್ಟಾಲಿನ್ ಗೆ ಸುಪ್ರೀಂ ಛೀಮಾರಿ

ನವದೆಹಲಿ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮ ನಿರ್ಮೂಲನೆ ಹೇಳಿಕೆಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ಸ್ಟಾಲಿನ್‌ಗೆ ತಾವು ಸಚಿವರಾಗಿದ್ದು,ತಮ್ಮ ಹೇಳಿಕೆಯ ಪರಿಣಾಮಗಳನ್ನು ತಿಳಿದುಕೊಳ್ಳಬೇಕು ಎಂದು ತೀಕ್ಷ್ಮವಾಗಿ ಚಾಟಿ ಬೀಸಿದೆ.

ನೀವು ಸಂವಿಧಾನದ ಅನುಚ್ಛೇದ 19(1)(ಎ) ಅಡಿಯಲ್ಲಿ ಮತ್ತು ಆರ್ಟಿಕಲ್ 25 ರ ಅಡಿಯಲ್ಲಿ ನಿಮ್ಮ ಹಕ್ಕನ್ನು ದುರುಪಯೋಗಪಡಿಸಿಕೊಳ್ಳುತ್ತೀರಿ. ಈಗ ನೀವು ಆರ್ಟಿಕಲ್ 32 ರ ಅಡಿಯಲ್ಲಿ (ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು) ನಿಮ್ಮ ಹಕ್ಕನ್ನು ಚಲಾಯಿಸುತ್ತಿದ್ದೀರಾ? ನೀ‌ವು ಹೇಳಿದ್ದರ ಪರಿಣಾಮ ಎಷ್ಟರ ಮಟ್ಟಿಗಿದೆ ಎಂದು ಯೋಚಿಸಿದ್ದೀರಾ, ನೀವು ಸಾಮಾನ್ಯ ವ್ಯಕ್ತಿಯಲ್ಲ, ನೀವು ರಾಜ್ಯದ ಮಂತ್ರಿಯಾಗಿದ್ದೀರಿ, ಅದರ ಪರಿಣಾಮಗಳನ್ನು ನೀವೇ ತಿಳಿದುಕೊಳ್ಳಬೇಕು ಎಂದು ಛೀಮಾರಿ ಹಾಕಿದ ನ್ಯಾಯಪೀಠ ವಿಚಾರಣೆಯನ್ನು ಮಾರ್ಚ್ 15ಕ್ಕೆ ಮುಂದೂಡಿದೆ.

ಸೆಪ್ಟೆಂಬರ್ 2023 ರಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದ್ದು ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು, ಅದು ತೀವ್ರ ವಿವಾದಕ್ಕೆ ಎಡೆ ಮಾಡಿತ್ತು.