ದೆವ್ವ ಆವರಿಸಿದೆ ಎಂದುಕೊಂಡು ಯುವಕ ಆತ್ಮಹತ್ಯೆ

ಮೈಸೂರು: ಈಗಿನ ಯುವ ಜನತೆಗೆ ಅದೇನಾಗಿದೆಯೋ ತಿಳಿಯದು ಏನೇನೋ ಕಾರಣಗಳಿಗೆ ಆತ್ಮಹತ್ಯೆಗೆ ಶರಣಾಗುವುದು ಮಾಮೂಲಿಯಾಗಿಬಿಟ್ಟಿದೆ.

ಇಂತಹುದೇ‌ ಕ್ಷುಲ್ಲಕ ಕಾರಣಕ್ಕೆ ಮೈಸೂರಿನಲ್ಲಿ ಯುವಕನೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೈಮೇಲೆ ದೆವ್ವದ ಬರುತ್ತಿದೆ ಎಂದು ಹೇಳಿ ಯುವಕ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾರ್ಬಳ್ಳಿ ಗ್ರಾಮದ ಋಷಭೇಂದ್ರ (21)ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.ಪಿಯುಸಿ ಓದಿದ್ದ ಋಷಭೇಂದ್ರ  ಕಳೆದ ನಾಲ್ಕು ವರ್ಷದಿಂದ ಮೈಮೇಲೆ ಗಾಳಿ ಆವರಿಸುತ್ತಿದೆ ಎಂದು ತಿಳಿದು ಯಾತನಡ ಅನುಭವಿಸುತ್ತಿದ್ದ.

ಈ ಬಗ್ಗೆ ಹೆತ್ತವರು ಮನೋವೈದ್ಯರನ್ನ ಸಂಪರ್ಕಿಸಿ ಚಿಕಿತ್ಸೆ ಕೊಡಿಸಿದ್ದರು.ಆದರೂ ಮಾನಸಿಕವಾಗಿ ಹೊರಬಂದಿರಲಿಲ್ಲ.ನಿನ್ನೆ ಮಾರ್ಬಳ್ಳಿಯಿಂದ ದೂರ ಗ್ರಾಮದಲ್ಲಿರುವ ಅಜ್ಜಿ ಮನೆಗೆ ಹೋಗುವುದಾಗಿ ತಿಳಿಸಿ ಹೊರಟವನು ಮನೆಗೆ ಹೊಂದಿರುಗಿಲ್ಲ.

ಮೈಸೂರಿನ ಬೆಮಲ್ ಲೇಔಟ್ ನಲ್ಲಿರುವ ಗಣಪತಿ ದೇವಸ್ಥಾನ ಬಳಿ ಇರುವ ಪಾರ್ಕ್ ನ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಈತ ಕಂಡು ಬಂದಿದ್ದಾನೆ.

ಈತನ ಕೈಮೇಲೆ ಅಮ್ಮ ಎಂದು ಹಚ್ಚೆ ಬರೆಸಿಕೊಂಡಿದ್ದು ತನ್ನ ಜೇಬಿನಲ್ಲಿ ತಾಯಿಯ ಮೊಬೈಲ್ ನಂಬರ್ ಬರೆದ ಚೀಟಿ ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕುವೆಂಪುನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಋಷಭೇಂದ್ರನ‌ ತಾಯಿ ನೀಡಿದ ಹೇಳಿಕೆಯನ್ನ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.