ಮೈಸೂರು: ಕೇಂದ್ರ ಪುರಸ್ಕೃತ ಪ್ರಸಾದ್ ಮತ್ತು ಸ್ವದೇಶ್ ದರ್ಶನ್ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಚಾಲನೆ
ನೀಡಿದ್ದಾರೆ.
ಪ್ರವಾಸೋದ್ಯಮ ಮಂತ್ರಾಲಯ ಭಾರತ ಸರ್ಕಾರ ಮತ್ತು ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.
ಗುರುವಾರ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನ ಅಭಿವೃದ್ಧಿ, ಇಕೋಲಾಜಿಕಲ್ ಎಕ್ಸ್ಪೀರಿಯನ್ಸ್ ಜೋನ್, ಟಾಂಗ ರೈಡ್ ಹೆರಿಟೇಜ್ ಎಕ್ಸ್ಪೀರಿಯನ್ಸ್ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಆಂಪಿ ಥಿಯೇಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.
ಈ ವೇಳೆ ಸಂಸದ ಪ್ರತಾಪ್ ಸಿಂಹ ಮಾತನಾಡಿ,45.70 ಕೋಟಿ ರೂ ವೆಚ್ಚದ ಭೂಮಿ ಪೂಜೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆ ಮತ್ತು ಸ್ವದೇಶ್ ದರ್ಶನ ಯೋಜನೆ ಅಡಿ ಮೈಸೂರಿನ ಚಾಮುಂಡಿ ಬೆಟ್ಟ ಅಭಿವೃದ್ಧಿಗೆ 45.70 ಕೋಟಿ, ದಸರ ವಸ್ತು ಪ್ರದರ್ಶನ ಹಾಗೂ ಮೈಸೂರು ಮೃಗಾಲಯದ ಅಭಿವೃದ್ಧಿಗೆ 80 ಕೋಟಿ ಅನುದಾನವನ್ನ ಪ್ರಧಾನಿ ಮೋದಿಯವರು ಕೊಟ್ಟಿದ್ದಾರೆ ಎಂದು ಹೇಳಿದರು.
ಈ ಎಲ್ಲಾ ಯೋಜನೆಗಳಿಂದ ಮೈಸೂರು ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಶ್ರೀಮಂತಿಕೆ ಕಾಣಬಹುದು ಇದಕ್ಕೆ ನೆರವಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ಕೆ. ವಿ ರಾಜೇಂದ್ರ ಮಾತನಾಡಿ,ಬಸ್ ನಿಲ್ದಾಣ, ಆಟೋ ನಿಲ್ದಾಣ ಗಳಂತೆ ಮೈಸೂರಿನಲ್ಲಿ 2 ರಿಂದ 3 ಕಡೆ ಟಾಂಗಾ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಇಕೋಲಾಜಿಕಲ್ ಎಕ್ಸೀರಿಯನ್ಸ್ ಅಡಿಯಲ್ಲಿ ಮೃಗಾಲಯ ಮತ್ತು ಕಾರಂಜಿ ಕೆರೆ ನ್ಯಾಷನಲ್ ಮ್ಯೂಸಿಯಂ ನಡುವೆ ಸಂಪರ್ಕ ಕಲ್ಪಿಸಿ ಪ್ರವಾಸಿಗರು ಒಮ್ಮೆಲೆ ಎರಡು ಸ್ಥಳಗಳ ಪರಿಸರ ಅನುಭವವನ್ನು ಪಡೆಯುವಂತೆ ಮಾಡಲಾಗುತ್ತದೆ. ಮೃಗಾಲಯದ ಒಳಗಡೆ ಜಿಪ್ ವಾಕ್ ಇನ್ನಿತರ ಆಟಗಳು ಹಾಗೂ ಸುಂದರ ಸ್ಥಳಗಳನ್ನು ನಿರ್ಮಿಸಿ ಪ್ರವಾಸಿಗರಿಗೆ ಅದ್ಬುತ ಅನುಭವ ನೀಡುವಂತೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಶಾಸಕ ಶ್ರೀವತ್ಸ, ನಗರ ಪೋಲಿಸ್ ಆಯುಕ್ತ ಬಿ. ರಮೇಶ್, ಪ್ರವಾಸೋದ್ಯಮ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ, ಮೃಗಾಲಯದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.