ಕಾಂಗ್ರೆಸ್ ಮುಖಂಡ,ಮಾಜಿ ಶಾಸಕ‌ ವಾಸು ನಿಧನ

ಮೈಸೂರು: ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಶಾಸಕ ವಾಸು ಅವರು ನಿಧನ ಹೊಂದಿದ್ದಾರೆ.

ಅವರಿಗೆ 72 ವರ್ಷಗಳಾಗಿತ್ತು,ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೈಸೂರಿನ ಜಯಲಕ್ಷ್ಮೀಪುರಂ ನಿವಾಸದಲ್ಲಿ ನಿಧನರಾಗಿದ್ದಾರೆ.

ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ವಂಚಿತರಾಗಿದ್ದರು.

ಮೈಸೂರು ಮೇಯರ್ ಆಗಿದ್ದ ವಾಸು ಅವರು ಬಳಿಕ ಶಾಸಕರೂ ಆದರು, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟರು ಜತೆಗೆ ಪತ್ರಿಕಾರಂಗಕ್ಕೂ ಕಾಲಿಟ್ಟಿ ‘ಪ್ರಜಾನುಡಿ’ ಪತ್ರಿಕೆ ಸ್ಥಾಪಿಸಿದ್ದಾರೆ.

ಇಂದು ನಿಧನರಾದ ವಾಸು ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಅವರು ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದೇಹದಾನ ಮಾಡಿದ್ದಾರೆ.

15 ವರ್ಷದ ಹಿಂದೆಯೇ ದೇಹದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಸಾರ್ವಜನಿಕರ ದರ್ಶನಕ್ಕೆ ಮೈಸೂರಿನ ಜಯಲಕ್ಷ್ಮಿಪುರಂ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರ ಅಂತಿಮ ದರ್ಶನ ಬಳಿಕ ಜೆಎಸ್ಎಸ್ ಮೆಡಿಕಲ್ ಕಾಲೇಜಿಗೆ ದೇಹ ಹಸ್ತಾಂತರ ಮಾಡಲಾಗುತ್ತದೆ.

ನೆಚ್ಚಿನ ನಾಯಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಮೈಸೂರಿನ ರೇಡಿಯೆಂಟ್ ಆಸ್ಪತ್ರೆಯತ್ತ ಧಾವಿಸಿದ್ದು, ಆಸ್ಪತ್ರೆ ಮುಂಭಾಗ ಪುತ್ರರು , ಸೊಸೆಯಂದಿರು ದುಃಖ ‌ತಪ್ತರಾಗಿದ್ದರು

ವಾಸು ನಿಧನ ಹಿನ್ನೆಲೆ, ರೆಡಿಯೆಂಟ್ ಆಸ್ಪತ್ರೆಗೆ ಶಾಸಕ ಜಿ.ಟಿ ದೇವಗೌಡ ಭೇಟಿ ನೀಡಿ ವಾಸು ಅವರ ನಿಧನಕ್ಕೆ ಸಂತಾಪ ಸೂಚಿಸಿದರು ನಾವು ಅವರು ಬೇರೆ ಬೇರೆ ಪಕ್ಷದಲ್ಲಿದ್ದರೂ ನಮ್ಮ ಅವರ ಸಂಬಂಧ ಉತ್ತಮವಾಗಿತ್ತು ಎಂದು ಹೇಳಿದರು.

ವಾಸು ಶಿಕ್ಷಣ ಪ್ರೇಮಿ, ಶಿಕ್ಷಣ ಕ್ಷೇತ್ರವನ್ನ ಕಟ್ಟಿದ್ದಾರೆ, ಬೆಳೆಸಿದ್ದಾರೆ. ವಾಸು ನಿಧನ ನಮಗೆ ತುಂಬಾ ನೋವುಂಟು ಮಾಡಿದೆ. ವಾಸು ಅವರ ಸಾವಿನ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ತಿಳಿಸಿದ್ದಾರೆ.

ರೇಡಿಯೆಂಟ್ ಆಸ್ಪತ್ರೆಗೆ ಶಾಸಕ ಕೆ ಹರೀಶ್ ಗೌಡ ಅವರು ಭೇಟಿ ನೀಡಿ ಸಂತಾಪ ಸೂಚಿಸಿದ್ದು, ವಾಸುರವರು ನಮ್ಮ ಮೈಸೂರಿನ ಹಿರಿಯ ರಾಜಕಾರಣಿ. ಅವರ ಸಾವು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ. ಒಳ್ಳೆಯ ರಾಜಕಾರಣಿಯನ್ನ ನಾವಿಂದು ಕಳೆದುಕೊಂಡಿದ್ದೇವೆ ಎಂದು ಕಂಬನಿ ಮಿಡಿದರು