ಬೆಂಗಳೂರು:ಯುವಕರು ದೇಶದ ಸಂಪತ್ತು,ಅವರು ಮಾದಕವಸ್ತುಗಳ ವ್ಯಸನಿಗಳಾಗದಂತೆ ಜಾಗೃತಿ ಮೂಡಿಸಲು ಸಾರ್ವಜನಿಕರು ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಸಹಯೋಗದಲ್ಲಿಂದು ರಾಜ್ಯ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವದ ಅಂಗವಾಗಿ ವಿಧಾನಸೌಧದ ಮೆಟ್ಟಿಲುಗಳ ಬಳಿ ಆಯೋಜಿಸಿದ್ದ ಪೊಲೀಸ್ ರನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವಕರು ಮಾದಕವಸ್ತುಗಳಿಗೆ ಬಲಿಯಾಗುತ್ತಿದ್ದಾರೆ ಎಂದು ವಿಷಾದಿಸಿದ ಸಿಎಂ, ಕರ್ನಾಟಕ ಮತ್ತು ಬೆಂಗಳೂರು ಮಾದಕವಸ್ತು ಮುಕ್ತವಾಗಿಸಲು ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಹಸಿರು ಕಡಿಮೆಯಾಗುತ್ತಿರುವ ಬೆಂಗಳೂರನ್ನು ಪುನಃ ಹಸಿರು ನಗರವನ್ನಾಗಿಸುವುದು ಹಾಗೂ ಯುವಕರು ಆರೋಗ್ಯವಂತರಾಗಿ ಬದುಕಬೇಕು ಎಂಬ ಉದ್ದೇಶದಿಂದ ಪೊಲೀಸ್ ಓಟ ಆಯೋಜಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸಿಎಂ ಹೇಳಿದರು.
ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು ಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಬೇಕಿದೆ, ಸೈಬರ್ ಅಪರಾಧಗಳನ್ನು ಮಾಡಬಾರದು ಎಂಬ ಮನೋಭಾವವೂ ಬೆಳೆಯಬೇಕು,ಜನರು ಸಮಾಜದ ಆಸ್ತಿಯಾಗಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ಗೃಹ ಸಚಿವ ಜಿ.ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಗೋವಿಂದರಾಜು ಎಸ್.ಬಿ.ಐ ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.