ದೇಶದಲ್ಲಿ ಸಿಎಎ ಕಾಯ್ದೆ ಜಾರಿ ಮಾಡಿ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

ನವದೆಹಲಿ: ಲೋಕಸಭೆ ಚುನಾಚಣೆ ಸಮೀಪಿಸುತ್ತಿರುವಾಗಲೇ ಮೋದಿ ಸರ್ಕಾರ ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಿ ಅಧಿಸೂಚನೆ ಹೊರಡಿಸಿದೆ.

2019ರಲ್ಲಿ ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳು ಸಹಿ ಹಾಕಿದ ನಂತರ ದೇಶದಲ್ಲಿ ಭಾರೀ ಪ್ರತಿಭಟನೆ ನಡೆದ ಕಾರಣ ಸಿಎಎ ಜಾರಿಯಾಗಿರಲಿಲ್ಲ.

ಈ ಹಿಂದಿನ ಚುನಾವಣೆಯ ಸಂದರ್ಭದಲ್ಲಿ ಸಿಎಎ ಜಾರಿಗೊಳಿಸುತ್ತೇವೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಈಗ ಲೋಕಸಭಾ ಚುನಾವಣೆಗೂ ಮುನ್ನ ಸಿಎಎ ಜಾರಿಗೊಳಿಸಿದೆ.

ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ಥಾನದಲ್ಲಿ ಕಿರುಕುಳಕ್ಕೆ ಒಳಗಾದ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡಲಾಗುತ್ತದೆ. 2014ರ ಡಿಸೆಂಬರ್ 31ಕ್ಕೆ ಮೊದಲು ರಕ್ಷಣೆ ಬಯಸಿ ಭಾರತಕ್ಕೆ ಶರಣಾರ್ಥಿಗಳಾಗಿ ಬಂದಿರುವ ಹಿಂದೂಗಳು, ಕ್ರೈಸ್ತರು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳಿಗೆ ಮಾತ್ರ ಸಿಎಎ ಅನ್ವಯವಾಗಲಿದೆ.

ಪೌರತ್ವ ನೋಂದಣಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿಯೇ ಮುಗಿಯಲಿದ್ದು, ದೇಶದಲ್ಲಿರುವ ಮುಸ್ಲಿಮರಿಗೆ ಸಿಎಎಯಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಲಾಗಿದೆ.

ಈ ಹಿಂದೆ ಖಾಸಗಿ ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಗೃಹ ಸಚಿವ ಅಮಿತ್‌ ಶಾ ಲೋಕಸಭಾ ಚುನಾವಣೆಗೆ ಮುನ್ನ ಸಿಎಎ ಜಾರಿಗೆ ತರುವುದಾಗಿ ಹೇಳಿದ್ದರು.

ಸಿಎಎ ದೇಶದ ಕಾಯ್ದೆಯಾಗಿದೆ. ಅದನ್ನು ಖಂಡಿತವಾಗಿಯೂ ಲೋಕಸಭಾ ಚುನಾವಣೆಗೆ ಮುನ್ನವೇ ನೋಟಿಫೈ ಮಾಡಲಾಗುವುದು ಅದರಲ್ಲಿ ಯಾವುದೇ ಗೊಂದಲ ಇಲ್ಲ.

ಸಿಎಎ ಕಾಂಗ್ರೆಸ್ ಸರ್ಕಾರದ ಭರವಸೆಯಾಗಿತ್ತು. ದೇಶ ವಿಭಜನೆಯಾದಾಗ ಮತ್ತು ಆ ದೇಶದಲ್ಲಿದ್ದ ಅಲ್ಪಸಂಖ್ಯಾತರು ಕಿರುಕುಳಕ್ಕೊಳಗಾದಾಗ, ನಿರಾಶ್ರಿತರಿಗೆ ಭಾರತದಲ್ಲಿ ಆಶ್ರಯ ನೀಡಿ ಭಾರತೀಯ ಪೌರತ್ವವನ್ನು ನೀಡಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿತ್ತು. ಈಗ ಕಾಂಗ್ರೆಸ್‌ ಆ ಭರವಸೆಯಿಂದ ಹಿಂದಕ್ಕೆ ಸರಿಯುತ್ತಿದೆ ಎಂದು ಶಾ ದೂರಿದ್ದರು.

ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ನಮ್ಮ ಮುಸ್ಲಿಂ ಸಮುದಾಯವನ್ನು ಪ್ರಚೋದಿಸಲಾಗುತ್ತಿದೆ. ಕಾಯ್ದೆಯಲ್ಲಿ ಯಾವುದೇ ನಿಬಂಧನೆ ಇಲ್ಲದ ಕಾರಣ ಸಿಎಎ ಯಾರ ಪೌರತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಸಿಎಎ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವ ನೀಡುವ ಕಾಯ್ದೆಯಾಗಿದೆ ಎಂದು ವಿವರಿಸಿದ್ದರು.

ಇದೀಗ‌ ದೇಶದಲ್ಲಿ ಸಿಎಎ‌ ಜಾರಿಯಾಗುತ್ತಿದೆ ಮುಂದೇನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.