ಮೈಸೂರು: ಕುಟುಂಬಸ್ಥರಿಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂಬುದೂ ಸೇರಿದಂತೆ ಏನೇನೊ ಆಮಿಷವೊಡ್ಡಿ ಯುವಕನೊಬ್ಬ ತನ್ನ ಸ್ನೇಹಿತೆಯನ್ನೇ ವಂಚಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳವಾಡಿಯಲ್ಲಿ ಈ ಘಟನೆ ನಡೆದಿದ್ದು,ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಯುವತಿ ಸುಪ್ರಿಯಾ ಎಂಬುವರಿಗೆ ವಿವಿಧ ಹಂತಗಳಲ್ಲಿ 21 ಲಕ್ಷ ರೂ ಹಾಗೂ ಕಾರು ಪಡೆದು ಸಂದೀಪ್ ಕುಮಾರ್ ಎಂಬಾತ ವಂಚಿಸಿದ್ದಾನೆ.
ಸುಮಾರು 8 ವರ್ಷಗಳ ಹಿಂದೆ ಸುಪ್ರಿಯಾಗೆ ಸಂದೀಪ್ ಕುಮಾರ
ಪರಿಚಯವಾಗಿದ್ದಾನೆ.ಯಾವುದೋ ವ್ಯವಹಾರ ಮಾಡುವುದಾಗಿ ನಂಬಿಸಿ ಸುಪ್ರಿಯಾ ಅವರಿಂದ 10 ಲಕ್ಷ ಪಡೆದಿದ್ದಾನೆ.
ನಂತರ ಈತನ ಸ್ನೇಹಿತ ಮನೋಜ್ ಕುಮಾರ್ ಎಂಬಾತ ತನ್ನ ಮನೆಯಿಂದ ಚಿನ್ನದ ಒಡವೆಗಳನ್ನ ಕಳುವು ಮಾಡಿ ಸಂದೀಪ್ ಕುಮಾರ್ ಗೆ ಕೊಟ್ಟಿದ್ದಾನೆ.ಅದೇ ಒಡವೆಗಳನ್ನ ಸುಪ್ರಿಯಾ ಹೆಸರಲ್ಲಿ ಸಂದೀಪ್ ಕುಮಾರ್ ಆಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಗಿರವಿ ಇರಿಸಿದ್ದ.
ಮನೋಜ್ ಕುಮಾರ್ ಮನೆಯವರು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದಾಗ ಸುಪ್ರಿಯಾ ಬಳಿಯಿಂದ ಸಂದೀಪ್ ಕುಮಾರ್ 8.5 ಲಕ್ಷ ಪಡೆದು ಸೆಟಲ್ ಮಾಡಿದ್ದಾನೆ.
ಅಲ್ಲದೆ ಸುಪ್ರಿಯಾ ಮನೆಯವರಿಗೆ ಸರ್ಕಾರಿ ಕೆಲಸ ಕೊಡಿಸುವ ಆಮಿಷ ತೋರಿಸಿ 2.5 ಲಕ್ಷ ಪಡೆದಿದ್ದಾನೆ,ಜತೆಗೆ ಸುಪ್ರಿಯಾ ಖರೀದಿಸಿದ್ದ ಕಾರು ಪಡೆದು ನಾಪತ್ತೆಯಾಗಿದ್ದಾನೆ.
ಹಣ ಹಾಗೂ ಕಾರು ಹಿಂದಿರುಗಿಸುವಂತೆ ಒತ್ತಾಯಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಏನಾದರೂ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.ಇದಕ್ಕೆಲ್ಲಾ ಪುನೀತ್ ಎಂಬಾತ ಸಹಕರಿಸಿದ್ದಾನೆ.
ಈ ಬಗ್ಗೆ ಸಂದೀಪ್ ಕುಮಾರ್ ಮತ್ತು ಆತನ ಸ್ನೇಹಿತರಾದ ಮನೋಜ್ ಕುಮಾರ್ ಮತ್ತು ಪುನೀತ್ ಎಂಬುವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಮೂವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ವಿಜಯನಗರ ಪೊಲೀಸರಲ್ಲಿ ಸುಪ್ರಿಯಾ ಮನವಿ ಮಾಡಿದ್ದಾರೆ.