ಶ್ರೀಸಾಮಾನ್ಯನಂತೆಯೇ ಇರುತ್ತೇನೆ -ಯದುವೀರ್

ಮೈಸೂರು: ನಾನು ಶ್ರೀಸಾಮಾನ್ಯನಂತೆಯೇ ಇರುತ್ತೇನೆ ಎಂದು ಮೈಸೂರು ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಮಾಧ್ಯಮ ಸಂವಾದದಲ್ಲಿ ಯದುವೀರ್  ಮಾತನಾಡಿದರು.

ಜನಸಾಮಾನ್ಯರು ನನ್ನನ್ನು ಹುಡುಕಿಕೊಂಡು ಅರಮನೆಗೆ ಬರುವ ಅಗತ್ಯ ಇಲ್ಲ, ನಾನೇ ಅರಮನೆಯಿಂದ ಹೊರಗೆ ಕಚೇರಿಯನ್ನು ತೆರೆಯುತ್ತೇನೆ,ಅರಮನೆಯಿಂದ ಹೊರ ಬಂದು ಶ್ರೀಸಾಮಾನ್ಯಂತೆ ಇರುತ್ತೇನೆ ಎಂದು

ಸ್ಪಷ್ಟಪಡಿಸಿದರು.

ಕಚೇರಿಯಲ್ಲಿ ಯಾವಾಗಲೂ ಸಾರ್ವಜನಿಕರಿಗೆ ಲಭ್ಯವಿರುತ್ತೇನೆ. ದಸರಾ ಹಾಗೂ ಪೂಜಾ ಸಮಾರಂಭಗಳು, ಮೈಸೂರಿನಲ್ಲಿ ಇಲ್ಲದೆ ಇರುವಂತಹ ಸಂದರ್ಭ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲೂ ನಾನು ಜನಸಾಮಾನ್ಯರಿಗೆ ದೊರೆಯುತ್ತೇನೆ ಎಂದು ತಿಳಿಸಿದರು.

ಚುನಾವಣಾ ಕಾರ್ಯದಲ್ಲಿ ನಿಮ್ಮ ಕುಟುಂಬದವರ ಬೆಂಬಲ ಇದೆಯೇ ಎಂಬ ಪ್ರಶ್ನೆಗೆ ಈ ಬಗ್ಗೆ ಚರ್ಚಿಸಿ ಮುಂದೆ ತಿಳಿಸುತ್ತೇನೆ ಎಂದು ಹೇಳಿದರು.

ನೀವು ಬಿಜೆಪಿ ಅಭ್ಯರ್ಥಿಯೆಂದು ಘೋಷಣೆಯಾಗುತ್ತಿದ್ದಂತೆಯೇ ಅರಮನೆಗೆ ಸಂಬಂಧಿಸಿದ ಕೆಲವು ಕೇಸ್ ಗಳ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿದೆಯಲ್ಲಾ ಎಂಬ ಪ್ರಶ್ನೆಗೆ ನಮ್ಮ ಕಾನೂನು ತಜ್ಞರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ, ರಾಜಕೀಯಕ್ಕೂ ಅದಕ್ಕೂ ಸಂಬಂಧ ಇಲ್ಲ ಎಂದು ಹೇಳಿದರು.

ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಅವರು ಈ ಹಿಂದೆ ಚಂದ್ರಪ್ರಭಾರಸ್ ವಿರುದ್ಧ ಸೋತಿದ್ದರು. ಈಗಲೂ ನಿಮಗೆ ಆ ಭಯ ಇದೆಯೇ ಎಂಬ ಪ್ರಶ್ನೆಗೆ ಆಗಿನ ಪರಿಸ್ಥಿತಿಯೇ ಬೇರೆ ಈಗಿನ ಪರಿಸ್ಥಿತಿಯೇ ಬೇರೆ ಎಂದು ಉತ್ತರಿಸಿದರು.

ನಾನು ಮೈಸೂರು ಕೊಡಗು ಸರ್ವಾಂಗೀಣ ಅಭಿವೃದ್ಧಿಗಾಗಿ ಒಂದು ದೃಷ್ಟಿಕೋನವನ್ನು ಇಟ್ಟುಕೊಂಡಿದ್ದೇನೆ, ಅದನ್ನು ಈಗ ಹೇಳುವುದಿಲ್ಲ,ಮುಂದಿನ ದಿನಗಳಲ್ಲಿ ಆ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಉತ್ತರಿಸಿದರು.

ಸಂವಾದದ ವೇಳೆ ಸಂಸದ ಪ್ರತಾಪ್ ಸಿಂಹ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್, ಶಾಸಕ ಶ್ರೀವತ್ಸ, ಮಾಜಿ ಶಾಸಕರಾದ ಎಸ್. ಎ  ರಾಮದಾಸ್, ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು.