ಮೈಸೂರು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಇಂದು ದೊಡ್ಡ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಶ್ರೀ ನಂಜುಂಡೇಶ್ವರನ ಸನ್ನಿಧಿಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಸಂಭ್ರಮ ಸಡಗರದಿಂದ ನಡೆಯಿತು.
ಗೌತಮ ಪಂಚ ರಥೋತ್ಸವದಲ್ಲಿ ಶ್ರೀ ಗಣಪತಿ, ಶ್ರೀಕಂಠೇಶ್ವರ ಸ್ವಾಮಿ, ಪಾರ್ವತಿ ಅಮ್ಮನವರು, ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರ ಸ್ವಾಮಿ ರಥಗಳು ರಾರಾಜಿಸಿದವು
ಬೆಳಗ್ಗೆ 6.30ರಿಂದ 6.50ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ನಡೆದ ಪಂಚಮಹಾ ರಥೋತ್ಸವ ನೆರವೇರಿತು.
ರಥ ಬೀದಿಯಲ್ಲಿ ಸಾಗಿದ ನೂರಾರು ಟನ್ ತೂಕದ ಬೃಹತ್ ರಥದಲ್ಲಿ ನಂಜುಂಡೇಶ್ವರ ಉತ್ಸವ ಮೂರ್ತಿ ರಾರಾಜಿಸಿತು
ಬಣ್ಣ ಬಣ್ಣದ ಬಾವುಟ, ಬಂಟಿಂಗ್ಸ್ ಗಳು ಹೂಗಳಿಂದ ರಥ ಕಂಗೊಳಿಸುತಿತ್ತು.
ದೇವಾಲಯದ ಪ್ರಧಾನ ಆಗಮಿಕ ನೀಲಕಂಠ ದೀಕ್ಷಿತ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.
ರಾಜ್ಯದ ಮೂಲೆಗಳಿಂದ ಆಗಮಿಸಿದ್ದ ಭಕ್ತರಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಏರ್ಪಡಿಸಲಾಗಿತ್ತು.
ನೀತಿ ಸಂಹಿತೆ ಹಿನ್ನೆಲೆ ಜಿಲ್ಲಾ, ತಾಲೂಕು ಆಡಳಿತ ನೇತೃತ್ವದಲ್ಲಿ ರಥೋತ್ಸವ ಯಾವುದೇ ಅಡೆತಡೆಗಳಿಲ್ಲದೆ ನಡೆಯಿತು.
ರಾತ್ರಿಯಿಂದಲೇ ದೇವಾಲಯದ ಸುತ್ತಮುತ್ತ, ಮೊಗಶಾಲೆಯಲ್ಲಿ ಭಕ್ತರು ಬೀಡು ಬಿಟ್ಟಿದ್ದು, ಶ್ರೀಕಂಠೇಶ್ವರನನ್ನು ಕಣ್ ತುಂಬಿಕೊಂಡರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ದೇವಾಲಯ ಸೇರಿದಂತೆ ರಥದ ಬೀದಿಗಳು ಹಾಗೂ ಸುತ್ತಮುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.