ರಾಜಕೀಯ ನಾಯಕರ ಸಮಾಗಮಕ್ಕೆ ಮೈಸೂರು ಸಾಕ್ಷಿ; ಯದುವೀರ್, ಲಕ್ಷ್ಮಣ್ ನಾಮಪತ್ರ ಸಲ್ಲಿಕೆ

ಮೈಸೂರು: ಲೋಕಸಭಾ ಚುನಾವಣಾ ಅಖಾಡ ರಂಗೇರಿದ್ದು ಇಂದು ಮೈಸೂರು –ಕೊಡಗು ಕ್ಷೇತ್ರದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಸಾಂಸ್ಕೃತಿಕ ನಗರಿ ಮೈಸೂರು ರಾಜಕೀಯ ನಾಯಕರ ಸಮಾಗಮಕ್ಕೆ ಸಾಕ್ಷಿಯಾಯಿತು.

ಅರಮನೆ ನಗರಿ ಮೈಸೂರು ರಾಜಕೀಯ ಶಕ್ತಿ ಕೇಂದ್ರವಾಗಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ ಶಿವಕುಮಾರ್, ಮಾಜಿ ಸಿಎಂಗಳು, ರಾಜ್ಯಾಧ್ಯಕ್ಷರುಗಳು, ಸಚಿವರು, ಮಾಜಿ ಸಚಿವರುಗಳು ಭಾಗವಹಿಸಿದ್ದರು.

ಮಧ್ಯಾಹ್ನ 12 ಗಂಟೆಗೆ ಮೈಸೂರು -ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ನಾಮಪತ್ರ ಸಲ್ಲಿಕೆ ಮಾಡಿದರು.

ಬೆಳಿಗ್ಗೆ 10.30ಕ್ಕೆ ಅರಮನೆ ಕೋಟೆ ಅಂಜನೇಯಸ್ವಾಮಿ ದೇವಾಲಯದಲ್ಲಿ ಯದುವೀರ್ ಅವರು ವಿಶೇಷ ಪೂಜೆ ಸಲ್ಲಿಸಿ, ನಂತರ ಮೆರವಣಿಗೆ ಮೂಲಕ ನೂತನ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಾಜಿ ಸಚಿವ ಅಶ್ವಥ್ ನಾರಾಯಣ್ ಹಾಗೂ ಯದುವೀರ್ ತಾಯಿ ಪ್ರಮೋದಾ ದೇವಿ ಒಡೆಯರ್, ಸಂಸದರಾದ ಪ್ರತಾಪ್‌ ಸಿಂಹ, ಪ್ರೀತಮ್‌ ಗೌಡ ಅವರು ಯದುವೀರ್ ಗೆ ಸಾಥ್ ನೀಡಿದರು.

ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ರಿಂದಲೂ ನಾಮಪತ್ರ ಸಲ್ಲಿಕೆಯಾಗಿದೆ.

ಮಧ್ಯಾಹ್ನ 2.30ಕ್ಕೆ ಎಂ. ಲಕ್ಷ್ಮಣ್ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಮಧ್ಯಾಹ್ನ 1 ಗಂಟೆಗೆ ಯರಗನಹಳ್ಳಿ ವೃತ್ತದಿಂದ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದರು.

ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ.ಶಿವಕುಮಾರ್ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಅವರು ಲಕ್ಷ್ಮಣ್ ಗೆ ಸಾಥ್ ನೀಡಿದರು.