ಮೈಸೂರು: ಸಿಎಂ ತವರಿನಲ್ಲೇ ಚುನಾವಣಾ ಬಹಿಷ್ಕಾರದ ಎಚ್ಚರಿಕೆ ಜತೆಗೆ ಯತೀಂದ್ರ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ನಮ್ಮ ಬೇಡಿಕೆ ಈಡೇರದಿದ್ದರೆ ನಮ್ಮ ಮೂರು ಗ್ರಾಮಗಳಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ಕೂಡಾ ನೀಡಿದ್ದಾರೆ.
ಚಾಮರಾಜನಗರ ಲೋಕಸಭಾ ಚುನಾವಣೆ ಹಿನ್ನೆಲೆ ಅಭ್ಯರ್ಥಿ ಸುನಿಲ್ ಬೋಸ್ ಪರ ಚುನಾವಣಾ ಪ್ರಚಾರ ಕೈಗೊಂಡಿದ್ದ ಮಾಜಿ ಶಾಸಕ ಡಾ ಯತೀಂದ್ರ ಅವರು ನಂಜನಗೂಡು ತಾಲೂಕು ಮಲ್ಲುಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಚಾರ ಮುಗಿಸಿ ಅದೇ ಗ್ರಾಮದಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಮುಂಭಾಗ ಕಳೆದ ಎರಡು ತಿಂಗಳುಗಳಿಂದ ವಿವಿಧ ಬೇಡಿಕೆ ಈಡೇರಿಕೆಗಾಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದವರನ್ನು ಭೇಟಿ ಮಾಡಿದರು.
ಆಗ ಧರಣಿನಿರತರು ಯತೀಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರು,
ಚುನಾವಣೆ ಗೋಸ್ಕರ ಇಲ್ಲಿಗೆ ಬಂದಿದ್ದೀರಿ ಇಲ್ಲದಿದ್ದರೆ ನೀವು ಯಾವುದೇ ಕಾರಣಕ್ಕೂ ಬರುತ್ತಿರಲಿಲ್ಲ ಎಂದು ಕಿಡಿಕಾರಿದರು.
ಕಾರ್ಖಾನೆಯವರು ನಮ್ಮ ಮಾತನ್ನು ಕೇಳುತ್ತಿಲ್ಲ ಇದನ್ನು ನಮ್ಮ ತಂದೆ ಯವರ ಗಮನಕ್ಕೆ ತರುವುದಾಗಿ ಎಂದು ಹೇಳುತ್ತಿದ್ದಂತೆ ಕುಪಿತಗೊಂಡ ಪ್ರತಿಭಟನಾಕಾರರು ಇನ್ನೂ ಈ ವಿಚಾರವನ್ನು ನಿಮ್ಮ ತಂದೆಯವರ ಗಮನಕ್ಕೆ ತಂದಿಲ್ಲವಾ ಎಂದು ಮತ್ತೆ ವಾಗ್ದಾಳಿ ನಡೆಸಿದರು
ಜತೆಗೆ ಮೂರು ಗ್ರಾಮಗಳಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.
ಇದರಿಂದ ಯತೀಂದ್ರ ಸಿದ್ದರಾಮಯ್ಯ ಬಂದ ದಾರಿಗೆ ಸುಂಕವಿಲ್ಲದಂತೆ ಅಲ್ಲಿಂದ ವಾಪಸಾದರು.