ಮೈಸೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿವ ಹಿನ್ನೆಲೆ ಮತದಾರರಲ್ಲಿ ಮತದಾನದ ಮಹತ್ವವನ್ನು ತಿಳಿಸಲು ಬೈಕ್ ರ್‍ಯಾಲಿ ಆಯೋಜಿಸಲಾಗಿತ್ತು.
ಭಾರತೀಯ ಚುನಾವಣಾ ಆಯೋಗವು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿ, ಯುವ ಮತದಾರರ ಗಮನ ಸೆಳೆಯಬೇಕಿದೆ. ಹಾಗಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಬೈಕ್ ರ್‍ಯಾಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ .ವಿ ರಾಜೇಂದ್ರ ತಿಳಿಸಿದರು.
ಇಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ, ಮಹಾನಗರ ಪಾಲಿಕೆ ವತಿಯಿಂದ ಗನ್ ಹೌಸ್ ಸರ್ಕಲ್ ನಿಂದ ಕೆಂಪೇಗೌಡ ಸರ್ಕಲ್ ವರೆಗೆ ಆಯೋಜಿಸಿದ್ದ ಬೈಕ್ ರ್‍ಯಾಲಿ ವೇಳೆ ಅವರು ಮಾತನಾಡಿದರು.
ಪ್ರತಿಯೊಬ್ಬ ಮತದಾರನು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನೈತಿಕ ಮತದಾನವನ್ನು ಕಡ್ಡಾಯವಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಚುನಾವಣಾ ಅಕ್ರಮಗಳನ್ನು ತಡೆಯುವುದು ಕೇವಲ ಅಧಿಕಾರಿಗಳಿಗೆ ಸೀಮಿತವಾಗಿಲ್ಲ. ಬದಲಾಗಿ ಪ್ರತಿಯೊಬ್ಬ ವ್ಯಕ್ತಿಯು ನಮ್ಮೊಂದಿಗೆ ಕೈಜೋಡಿಸಿ ಚುನಾವಣಾ ಅಕ್ರಮಗಳು ಕಂಡುಬಂದರೆ ಸಿ ವಿಜಿಲ್ ಆಪ್ ನಲ್ಲಿ ವಿಡಿಯೋ, ಆಡಿಯೋ, ಫೋಟೋ ಹಾಗೂ ಜಿ.ಪಿ.ಎಸ್ ಮೂಲಕ ಮಾಹಿತಿಯನ್ನು ನೀಡಿ ಅಕ್ರಮವನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಆಯುಕ್ತ ರಮೇಶ್ ಬನೋತ್, ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷೆ ಕೆ.ಎಂ ಗಾಯಿತ್ರಿ,ಎಸ್ಪಿ ಸೀಮಾ ಲಾಟ್ಕರ್, ಮಹಾನಗರ ಪಾಲಿಕೆಯ ಆಯುಕ್ತ ಎನ್. ಎನ್ ಮಧು ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.