ಮೈಸೂರು: ದೇಶದಲ್ಲಿ ಏನ್ ಡಿಎಗೆ ಹೆಚ್ಚಿನ ಸ್ಥಾನ ಬರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ಮೈಸೂರಿನಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ ಹೆಚ್ಚು ಸ್ಥಾನ ಪಡೆಯುವುದಿಲ್ಲ, ಇಂಡಿಯಾ ಒಕ್ಕೂಟಕ್ಕೆ ಹೆಚ್ಚು ಸ್ಥಾನ ಲಭಿಸಲಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ,ಅವರು ದೇಶದ ಪ್ರಧಾನಿ ಹಾಗಾಗಿ ಮೈಸೂರಿಗೆ ಬಂದರೆ ನಮ್ಮದೇನು ತಕರಾರು ಇಲ್ಲ ಎಂದು ಹೇಳಿದರು.
ರಾಜ್ಯಕ್ಕೆ ಬರ ಪರಿಹಾರ ನೀಡಿಲ್ಲ, ತೆರಿಗೆ ಹಣವನ್ನು ಸರಿಯಾಗಿ ನೀಡಿಲ್ಲ ಈ ಎಲ್ಲದಕ್ಕೂ ಪ್ರಧಾನ ಮಂತ್ರಿಗಳು ಉತ್ತರ ನೀಡಬೇಕು ಎಂದು ಸಿಎಂ ಆಗ್ರಹಿಸಿದರು.
ಸಂವಿಧಾನ ಪರ ಬಿಜೆಪಿಯವರು ಇಲ್ಲ,ಈ ಹಿಂದೆ ಅನಂತ ಕುಮಾರ್ ಹೆಗಡೆ ಎರಡು ಬಾರಿ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ, ಅವರ ವಿರುದ್ಧ ಬಿಜೆಪಿ ಕ್ರಮ ಕೈಗೊಂಡಿತೆ ಎಂದು ಪ್ರಶ್ನಿಸಿದರು.
ಕಳೆದ ಐದು ವರ್ಷದಿಂದ ಅನಂತ್ ಕುಮಾರ್ ಹೆಗಡೆ ತಮ್ಮ ಕ್ಷೇತ್ರದಲ್ಲಿ ಯಾವುದೇ ಕೆಲಸವನ್ನು ಮಾಡಿಲ್ಲ, ಚುನಾವಣೆಗೆ ಮೂರು ತಿಂಗಳು ಇದೆ ಎನ್ನುವಾಗ ಎದ್ದು ಬಂದು ಮಾತನಾಡಿದ್ದಾರೆ ಈ ಬಾರಿ ಅವರು ಸೋಲುವುದು ಖಚಿತ ಎಂಬ ಹಿನ್ನೆಲೆಯಲ್ಲಿ ಬಿಜೆಪಿ ಅವರಿಗೆ ಟಿಕೆಟ್ ನೀಡಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಆರೋಪಿಗಳನ್ನು ಎನ್ಐಎ ಬಂಧಿಸಿರುವ ಕುರಿತು ಧನ್ಯವಾದ ಹೇಳಿದ ಸಿಎಂ, ರಾಜ್ಯದ ಪೊಲೀಸರು ಸಹ ಎನ್ಐಎ ಜತೆ ಕಾರ್ಯನಿರ್ವಹಿಸಿದ್ದಾರೆ ಅವರನ್ನು ಇಂದು ಬೆಂಗಳೂರಿಗೆ ಕರೆತರಲಾಗುತ್ತಿದ್ದು, ಆನಂತರ ಅವರನ್ನು ವಿಚಾರಣೆಗೆ ಒಳಪಡಿಸಿ ಅವರ ಉದ್ದೇಶ ಏನಿತ್ತು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲಿದ್ದಾರೆ ಎಂದು ಹೇಳಿದರು.