ಮಂಡ್ಯ: ಪೂರ್ವದಲ್ಲಿ ಸೂರ್ಯ ಹುಟ್ಟೋದು ಎಷ್ಟು ಸತ್ಯವೋ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದೂ ಅಷ್ಟೇ ಸತ್ಯ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.
ಮಂಡ್ಯದಲ್ಲಿ ನಡೆದ ಅಭೂತಪೂರ್ವ ಪ್ರಜಾಧ್ವನಿ-2 ಕಾರ್ಯಕ್ರಮದಲ್ಲಿ ಸೇರಿದ್ದ ಜನಸಾಗರವನ್ನು ಉದ್ದೇಶಿಸಿ ಸಿಎಂ ಮಾತನಾಡಿದರು.
ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆ ಶಾಸಕರು ಅವರು ಅಲ್ಲೇ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಬಹುದಿತ್ತು, ಆದರೆ ಸೋಲಿನ ಭಯದಿಂದ ಇಲ್ಲಿಗೆ ಬಂದು ಎನ್ ಡಿ ಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ, ಇಲ್ಲೂ ಖಚಿತವಾಗಿ ಸೋಲಿಸಲು ಮಂಡ್ಯ ಜಿಲ್ಲೆಯ ಜನತೆ ನಿರ್ಧರಿಸಿದ್ದಾರೆ,ಹಾಗಾಗಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ನರೇಂದ್ರ ಮೋದಿಯವರ ಅಚ್ಚೆ ದಿನ್ 10 ವರ್ಷ ಕಳೆದರೂ ಭಾರತೀಯರಿಗೆ ಬಂದಿಲ್ಲ. ರಾಜ್ಯದ ಜನತೆಗೆ ಅಚ್ಚೆ ದಿನ್ ಕಾಣಿಸಿಯೇ ಇಲ್ಲ. ಮೋದಿಯವರ ಕಾರಣದಿಂದ ಏರಿಕೆಯಾಗಿದ್ದ ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ಬೇಳೆ-ಕಾಳು, ಅಡುಗೆ ಎಣ್ಣೆ ಸೇರಿ ಎಲ್ಲದರ ಬೆಲೆ ಏರಿಕೆ ನೀತಿಯಿಂದ ಹೈರಾಣಾಗಿದ್ದ ರಾಜ್ಯದ ಜನರ ಬದುಕಿನ ಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದ ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆವು. ಇದರಿಂದ ರಾಜ್ಯದ ಪ್ರತಿ ಕುಟುಂಬಗಳಿಗೆ, ಪ್ರತಿ ತಿಂಗಳು 5 ರಿಂದ 6 ಸಾವಿರ ರೂಪಾಯಿ ನೆರವಿನ ಕಾರ್ಯಕ್ರಮ ನೀಡಿದ್ದೇವೆ ಎಂದರು.
ರಾಜ್ಯದ ಜನರಿಗೆ ಅನ್ನಭಾಗ್ಯದ ಅಕ್ಕಿ ಕೊಡ ಕೊಡದಂತೆ ಮೋದಿಯವರ ಕೇಂದ್ರ ಸರ್ಕಾರ ತೊಂದರೆ ಕೊಟ್ಟರೂ ಕೂಡ ನಾವು ಅಕ್ಕಿ ಜೊತೆಗೆ ಹಣವನ್ನೂ ನಮ್ಮ ಜನರ ಬದುಕಿಗೆ ಕೊಡುತ್ತಿದ್ದೇವೆ ಎಂದರು.
ರಾಜ್ಯದಲ್ಲಿ ಬಿಜೆಪಿಯಿಂದ ಗೆದ್ದ ಸಂಸದರು ರಾಜ್ಯದ ಸಮಸ್ಯೆಗಳ ಬಗ್ಗೆ ನೆಪಕ್ಕೂ ಧ್ವನಿ ಎತ್ತದೆ ರಾಜ್ಯದ ಜನರಿಂದ ಪಡೆದ ಮತಕ್ಕೆ ಅವಮಾನ ಮಾಡಿದರು. ಈ ಅವಮಾನಕ್ಕೆ ತಕ್ಕ ಉತ್ತರ ನೀಡಿ ರಾಜ್ಯದ ಜನತೆಯ ಪರವಾಗಿ ಧ್ವನಿ ಎತ್ತುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಮಂಡ್ಯ ಜನತೆಯ ಸ್ವಾಭಿಮಾನಿ ತಾಕತ್ತನ್ನು ತೋರಿಸಿ ಎಂದು ಸಿಎಂ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶ್ರೀರಾಮನವಮಿಯ ಶುಭಾಶಯಗಳನ್ನು ಮಂಡ್ಯದ ಜನತೆಗೆ ಮತ್ತು ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಕೋರಿದರು.
ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ, ಡಿಸಿಎಂ ಡಿ.ಕೆ.ಶಿವಕುಮಾರ್ , ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಸೇರಿ ಮೈಸೂರು, ಮಂಡ್ಯ ಜಿಲ್ಲೆಯ ಶಾಸಕರುಗಳು, ಮುಖಂಡರು ಉಪಸ್ಥಿತರಿದ್ದರು.