ಮೈಸೂರು: ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿವೆ.
ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್, ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಸೇರಿದಂತೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ಒಟ್ಟು 18 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇವರೆಲ್ಲರ ಭವಿಷ್ಯ ಮತಯಂತ್ರದಲ್ಲಿ ಅಡಗಿದೆ.
ನಿನ್ನೆ ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾದ ನಂತರ ಮತಗಟ್ಟೆ ಸಿಬ್ಬಂದಿ ಇವಿಎಂ ಗಳನ್ನು ಸೀಲ್ ಮಾಡಿ ಆಯಾಯ ಮಸ್ಟರಿಂಗ್ ಕೇಂದ್ರಗಳಿಗೆ ಸುರಕ್ಷಿತವಾಗಿ ತಂದಿದ್ದಾರೆ.
ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸ್ಟ್ರಾಂಗ್ ರೂಮ್ನಲ್ಲಿ ಎಲ್ಲಾ ಮತಯಂತ್ರಗಳನ್ನು ಸುರಕ್ಷಿತವಾಗಿ ಇಡಲಾಗಿದೆ.
ನಿನ್ನೆ ರಾತ್ರಿ ಸ್ಟ್ರಾಂಗ್ ರೂಮ್ಗೆ ಇವಿಎಂ ಗಳನ್ನು ತಂದ ಸಿಬ್ಬಂದಿಗಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿ ಧನ್ಯವಾದ ಸಲ್ಲಿಸಲಾಯಿತು.
ಮತ ಯಂತ್ರಗಳನ್ನು ಇಟ್ಟಿರುವ ಸ್ಟ್ರಾಂಗ್ ರೂಮ್ ಗೆ ದಿನದ 24 ಗಂಟೆಯೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಕೃಷ್ಣರಾಜ, ಚಾಮುಂಡೇಶ್ವರಿ, ಚಾಮರಾಜ, ನರಸಿಂಹರಾಜ, ಪಿರಿಯಾಪಟ್ಟಣ, ಹುಣಸೂರು, ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ನ್ನೊಕಳಗೊಂಡ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ 2192 ಸಾಮಾನ್ಯ ಮತಗಟ್ಟೆ 10 ಆಕ್ಸಿಲೆರಿ ಮತಗಟ್ಟೆ ಸೇರಿದಂತೆ 2202 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.
ತಲಾ ಎರಡು ಬ್ಯಾಲೆಟ್ ಯೂನಿಟ್ ನಂತೆ ಒಟ್ಟು 5742 ಬ್ಯಾಲೆಟ್ ಯೂನಿಟ್, 3036 ಕಂಟ್ರೋಲ್ ಯೂನಿಟ್, 3136 ವಿವಿ ಪ್ಯಾಟ್ ಗಳನ್ನು ನೀಡಲಾಗಿತ್ತು ಇವೆಲ್ಲ ಈಗ ಸ್ಟ್ರಾಂಗ್ ರೂಮ್ನಲ್ಲಿ ಭದ್ರವಾಗಿವೆ.