ಮಂಡ್ಯ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಪ್ರಜ್ವಲ್ ವಿರುದ್ಧ ಇದೀಗ ರಾಜ್ಯದಲ್ಲಿ ಆಕ್ರೋಶಗಳು ಭುಗಿಲೆದ್ದಿದ್ದು ಈ ಬಗ್ಗೆ ಮಂಡ್ಯದಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸ್ಫೋಟಕ ಹೇಳಿಕೆ ನೀಡಿ ಶಾಕ್ ಕೊಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಜೆಡಿಎಸ್ ಪಕ್ಷವನ್ನು ಎನ್‌ಡಿಎ ನಿಂದ ಹೊರ ಹಾಕಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿದರು.
ಆಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬ್ಲ್ಯೂ ಫಿಲ್ಮ್ ಮಾಡುವವರ ಕಡೆಯೂ ಇಷ್ಟೊಂದು ವಿಡಿಯೋ ಇದಾವೋ ಇಲ್ಲ ಗೊತ್ತಿಲ್ಲ ಎಂದು ಪ್ರಜ್ವಲ್ ರೇವಣ್ಣ ವಿರುದ್ಧ ಗುಡುಗಿದರು.
ದೇವೇಗೌಡರಿಗೆ ಈ ವಯಸ್ಸಿನಲ್ಲಿ ಇಂತಹ ನೀಚ ಕೃತ್ಯವನ್ನು ನೋಡುವ ದೌರ್ಭಾಗ್ಯ ಬಂದಿದೆ. ನನ್ನನ್ನೂ ಸೇರಿದಂತೆ ಹಲವರನ್ನ ಮುಗಿಸಿರೋದೇ ಇವರುಗಳು ಎಂದು ಹೇಳಿದರು.
ಗಂಗಾಧರ್ ಕೊಲೆ ಕೇಸ್‌ನಲ್ಲಿ ನನ್ನನ್ನು ಸೇರಿಸಲು ದೇವೇಗೌಡ್ರು 8 ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದರು, ನೊಂದವರ ಶಾಪವೇ ಇಂದು ಅವರಿಗೆ ತಟ್ಟಿದೆ ಎಂದು ತಿಳಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ಮಾಡಿರುವ ನೀಚ ಕೆಲಸದಿಂದ ದೇವೇಗೌಡರು ತಲೆ ತಗ್ಗಿಸುವಂತಾಗಿದೆ, ಅವರ ಕುಟುಂಬದಿಂದ ಅನ್ಯಾಯಕ್ಕೊಳಗಾಗಿರುವ ಸಂತ್ರಸ್ತರ ಪಟ್ಟಿಯಲ್ಲಿ ನಾನೂ ಕೂಡ ಇದ್ದೀನಿ ಎಂದು ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ಹಾಸನಕ್ಕೆ ಭೇಟಿ ನೀಡಿ ಸಂತ್ರಸ್ತೆಯರಿಗೆ ನ್ಯಾಯ ಕೊಡಿಸಬೇಕು. ಅನ್ಯಾಯ ಆಗಿರುವುದು ಅವರ ಕುಟುಂಬದಿಂದ, ಹಾಗಾಗಿ ಧಮ್ಕಿ ಹಾಕೋದನ್ನು ಬಿಟ್ಟುಬಿಡಿ ಎಂದು ಸೂಚ್ಯವಾಗಿ ಹೇಳಿದರು.
ಹಾಸನ ಡಿಸಿ ಅವರ ಬಗ್ಗೆ ಕುಮಾರಸ್ವಾಮಿ ಅವರು ಮಾತನಾಡಿದ್ದು ಸರಿಯಲ್ಲ,ಡಿಸಿ ಸರಿಯಾಗಿಯೇ ಮಾತನಾಡಿದ್ದಾರೆ ಎಂದು ಶಿವರಾಮೇಗೌಡ ತಿಳಿಸಿದರು.
ಯಾರೂ ಮಾಡದ ಘೋರ ಅಪರಾಧ ಮಾಡಿದ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ರೇವಣ್ಣ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸುದರು.
ಒಂದು ವೇಳೆ ತಂದೆ-ಮಗ ಇಬ್ಬರೂ ತಪ್ಪಿಲ್ಲದಿದ್ದರೆ ಅದನ್ನೂ ಬಹಿರಂಗಪಡಿಸಲಿ, ರೇವಣ್ಣನನ್ನು ನಾನು ಇಂದು ನೋಡ್ತಿಲ್ಲ, ಇಂಗ್ಲೆಂಡ್‌ಗೆ ಹೋಗಿದ್ದ ಸಂದರ್ಭದಲ್ಲೇ ಅವರು ತಗಲಾಕಿಕೊಂಡಿದ್ದರು ಎಂದು ಸ್ಪೋಟಕ ಹೇಳಿಕೆ ನೀಡಿದರು.
ಎಚ್.ಡಿ.ರೇವಣ್ಣ ಅಂತಹ ಒಳ್ಳೆಯ ನಡವಳಿಕೆ ಇರುವ ವ್ಯಕ್ತಿಯಲ್ಲ,ಪ್ರಜ್ವಲ್ ರೇವಣ್ಣ ಇಷ್ಟೊಂದೆಲ್ಲ ಮಾಡುವಾಗ ಅವರ ಅಪ್ಪ ಅಮ್ಮ ಕತ್ತೆ ಏನು ಮಾಡ್ತಾ ಇದ್ರು, ಇಂತಹ ವಿಕೃತ ಮನಸ್ಥಿತಿಯವರನ್ನು ನಾನು ಎಲ್ಲಿಯೂ ನೋಡೇ ಇಲ್ಲ,ಪ್ರಜ್ವಲ್ ಮುಂದೆ ಉಮೇಶ್ ರೆಡ್ಡಿ ಏನೇನೂ ಇಲ್ಲ ಎಂದು ಎಲ್ ಆರ್.ಶಿವರಾಮೇಗೌಡ ಹೇಳಿದರು.