ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ

ಡಾ.ಗುರುಪ್ರಸಾದ ಎಚ್ ಎಸ್
ಲೇಖಕರು ಮತ್ತು ಉಪನ್ಯಾಸಕರು
1947ರ ಆಗಸ್ಟ್ 15ರಂದು ಇಡೀ ದೇಶವೇ ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದರೆ ಕಲ್ಯಾಣ ಕರ್ನಾಟಕ ಪ್ರದೇಶ ಮಾತ್ರ ಇನ್ನೂ ಗುಲಾಮಗಿರಿ ಎಂಬ ನರಕದಲ್ಲಿ ಇತ್ತು.
ಹೈದರಾಬಾದ್‍ನ ನಿಜಾಮನ ಆಳ್ವಿಕೆ ಈ ಜನರ ಬದುಕನ್ನು ದುರ್ಭರವಾಗಿಳಿಸಿತ್ತು.
ವಂದೇ ಮಾತರಂ ಹೇಳುವುದು, ತ್ರಿವರ್ಣ ಧ್ವಜ ಹಾರಿಸುವುದು ಅಪರಾಧವಾಗಿತ್ತು.
ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಚಳವಳಿ ನಿಜಾಮನ ನಿರಂಕುಶ ಪ್ರಭುತ್ವ ಹಾಗೂ ಸ್ವಾತಂತ್ರ್ಯ ದ ಹೋರಾಟವಾಗಿತ್ತು. 1948ರ ಸೆಪ್ಟೆಂಬರ್ 17ರಂದು ಭಾರತದ ಒಕ್ಕೂಟಕ್ಕೆ ಸೇರಿದಕ್ಕೆ ಇಂದು (ಸೆ. 17) 72 ವರ್ಷ ತುಂಬುತ್ತದೆ.
ಇದರ ಹಿಂದೆ ಸಾವಿರಾರು ದೇಶಭಕ್ತರು ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲರ ಹೋರಾಟದ ಶ್ರಮವಿದೆ.
ಬ್ರಿಟಿಷ್ ಇಂಡಿಯಾ ಮತ್ತು ಸಂಸ್ಥಾನಿಕ ಇಂಡಿಯಾ ಸ್ವತಂತ್ರವಾದ ಗಳಿಗೆಯಲ್ಲಿ ದೇಶದ ವಿವಿಧೆಡೆ ಇದ್ದ 560ಕ್ಕೂ ಹೆಚ್ಚು ಪ್ರಾಂತ್ಯಗಳ ರಾಜರು ಭಾರತದ ಒಕ್ಕೂಟದ ವ್ಯವಸ್ಥೆಗೆ ಸೇರಿದರು.
ಆದರೆ ಕಾಶ್ಮೀರ, ಜುನಾಘಡ ಹಾಗೂ ಹೈದರಾಬಾದ್ ಪ್ರಾಂತಗಳು ರಾಜರು ಒಕ್ಕೂಟದಲ್ಲಿ ಸೇರಲಿಲ್ಲ.
ಹೈದರಾಬಾದ್ ಕರ್ನಾಟಕ ಎಂದು ಗುರುತಿಸಿಕೊಳ್ಳುವ ಪ್ರದೇಶಕ್ಕೆ ಹಿನ್ನೆಲೆ ಕ್ರಿ.ಶ. 1724ರಿಂದಲೂ ಇತ್ತು.
1724ರಲ್ಲಿ ನಿಜಾಮ-ಉಲ್ಮ-ಮುಲ್ಕ್ ಎಂಬ ರಾಜ ಹೈದರಾಬಾದ್ ರಾಜ್ಯವನ್ನು ಸ್ಥಾಪಿಸಿ 1748ರವರೆಗೆ ರಾಜ್ಯಭಾರ ನಡೆಸಿದ. ಅಲ್ಲಿಂದ 1948ರವರೆಗಿನ ಸುಮಾರು 224 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಏಳು ಜನ ಅಸಫಿಯಾ ವಂಶದ ರಾಜರು ಈ ಪ್ರದೇಶವನ್ನು ಆಳಿದರು.
ಈ ಅವಧಿಯಲ್ಲಿ ಈ ಪ್ರದೇಶದಲ್ಲಿ ಹಿಂದೂ-ಮುಸ್ಲಿಂ ಸಂಸ್ಕೃತಿ ಮಿಳಿತಗೊಂಡು ವೈವಿಧ್ಯಮಯ ನಂಬಿಕೆ, ಆಚರಣೆಗಳು ಹುಟ್ಟಿಕೊಂಡವು. ಆ ಮೂಲಕ ಜಗತ್ತಿಗೆ ಸಾಮಾಜಿಕ ಸಾಮರಸ್ಯದ ಪಾಠವನ್ನೂ ನೀಡಿತು. ಕೊನೆಯ ನಿಜಾಮ ಮೀರ್ ಉಸ್ಮಾನ್ ಅಲಿಖಾನ್ (1911-1948)ನ ಅವಧಿಯಲ್ಲಿ ಮಾತ್ರ ದೊರೆ ಮನೆತನದ ವಿಲಾಸಿ ಆಡಳಿತ ಹಾಗೂ ಬಹುಸಂಖ್ಯಾತರ ಮೇಲಿನ ದಬ್ಬಾಳಿಕೆಗಳು ಹೆಚ್ಚಿದವು.
ಭಾರತ ಒಕ್ಕೂಟದಲ್ಲಿ ವಿಲೀನಗೊಳ್ಳಲು ನಿರಾಕರಿಸಿದ ನಿಜಾಮ, ಭಾರತದ ಸೈನ್ಯವನ್ನು ಎದುರಿಸಲೆಂದು ಸೈನ್ಯದ ಯೋಧರು ಹಾಗೂ ಖಾಸಗಿಯಾಗಿ ಕಾರ್ಯಾಚರಿಸುತ್ತಿದ್ದ ನೂರಾರು ಸಂಖ್ಯೆಯ ಪುಂಡರನ್ನು ಸಜ್ಜುಗೊಳಿಸಿಟ್ಟಿದ್ದ. ಒಕ್ಕೂಟ ಹಾಗೂ ಸಂಸ್ಥಾನದ ರಾಯಭಾರಿಗಳ ನಡುವೆ ವಿಲೀನದ ಮಾತುಕತೆಗಳು ನಡೆಯುತ್ತಲೇ ಇದ್ದವು. ನಿಜಾಮ ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಇದನ್ನು ನೋಡಿದ ಸಂಸ್ಥಾನದೊಳಗಿನ ಸ್ವಾತಂತ್ರ್ಯ ಪ್ರಿಯ ಪ್ರಜೆಗಳು, ವಿಲೀನಕ್ಕೆ ಒತ್ತಾಯಿಸಿ ಹೈದರಾಬಾದ್ ಕರ್ನಾಟಕದಲ್ಲಿ ಚಳವಳಿ ಪ್ರಾರಂಭಿಸಿದರು.
ಒಂದು ವರ್ಷವಾದರೂ ನಿಜಾಮ ಹೋರಾಟಕ್ಕೆ ಮಣಿಯಲಿಲ್ಲ, ಬದಲಾಗಿ, ತಾನು ಸಾಕಿಕೊಂಡಿದ್ದ ಪುಂಡರ ಪಡೆಯಾದ ‘ರಜಾಕಾರ’ರನ್ನು ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಛೂಬಿಟ್ಟ. ರಜಾಕಾರರು ಖಾಸಿಂ ರಜ್ವಿ ಎಂಬಾತನ ನೇತೃತ್ವದಲ್ಲಿ ಹೋರಾಟಗಾರರ ಮೇಲೆ ಹಲ್ಲೆ, ಕೊಲೆ, ಬಲಾತ್ಕಾರ, ಅತ್ಯಾಚಾರಗಳನ್ನು ನಡೆಸ ತೊಡಗಿದರು.
ಬೀದರ್ ಜಿಲ್ಲೆಯ ಅನೇಕ ಗ್ರಾಮಗಳು ಖಾಸಿಂ ರಜ್ವಿಯ ಕ್ರೌರ್ಯಕ್ಕೆ ನಲುಗಿ ಹೋದವು.
ಇದರಲ್ಲಿ ಬಸವಕಲ್ಯಾಣದ ಗೋರ್ಟಾ(ಬಿ) ಪ್ರಮುಖ. ಇಲ್ಲಿ ಭಯಾನಕ ಹತ್ಯಾಕಾಂಡವೊಂದು ನಡೆಯಿತು. ಗೋರ್ಟಾ ಸುತ್ತಮುತ್ತಲಿನ ಏಳೆಂಟು ಗ್ರಾಮಗಳ ಮೇಲುಸ್ತುವಾರಿ ವಹಿಸಿದ್ದ ಖಾಸಿಂ ರಜ್ವಿಯ ಬಲಗೈ ಬಂಟ ಇಸಾಮುದ್ದಿನ್‍ನ ಕ್ರೌರ್ಯ ಹೆಚ್ಚಾದಾಗ, ಸ್ಥಳೀಯರು ಅವನನ್ನು ಹತ್ಯೆಗೈದಿದ್ದರು. ಇದಕ್ಕೆ ಸೇಡು ತೀರಿಸಲು 1948ರ ಮೇ 9ರಂದು ಎಂ.ಎ.ಮಸ್ತಾನ್ ನೇತೃತ್ವದ ರಜಾಕಾರರ ಪಡೆ ಗೋರ್ಟಾ ಗ್ರಾಮಕ್ಕೆ ನುಗ್ಗಿ 200 ಜನರ ಹತ್ಯೆಗೈದಿತು. ಇಡೀ ಊರಿಗೆ ಬೆಂಕಿ ಹಚ್ಚಿ ಸ್ಮಶಾನ ಮಾಡಿಬಿಟ್ಟರು.
ಎಲ್ಲ ದೇಶಾಭಿಮಾನಿಗಳು ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ರಜಾಕಾರರ ನೀಚ ಕೃತ್ಯಗಳ ವಿರುದ್ಧ ಸಂಘಟಿತರಾಗಿ ಹೋರಾಡತೊಡಗಿದರು.
ಈ ಹೋರಾಟದಲ್ಲಿ ಸಾವಿರಾರು ಸ್ವಾತಂತ್ರ್ಯಯೋಧರು ಮೃತಪಟ್ಟರು. ರಜಾಕಾರರ ಹಿಂಸೆ ಹೆಚ್ಚಿದಂತೆ ಚಳವಳಿಗಾರರ ಪ್ರತಿರೋಧವೂ ಬಲವಾಯಿತು. ಹೈದರಾಬಾದ್ ಸುತ್ತಮುತ್ತ ಗಡಿ ಪ್ರದೇಶದಲ್ಲಿ ಸುಮಾರು 100 ಶಿಬಿರಗಳನ್ನು ಪ್ರಾರಂಭಿಸಲಾಯಿತು.
ಒಂದೊಂದು ಶಿಬಿರದಲ್ಲಿ 25-100 ಜನ ಸೇನಾನಿಗಳು ಕಾರ್ಯನಿರ್ವಹಿಸುತ್ತಿದ್ದರು. ಒಂದೊಂದು ಶಿಬಿರಕ್ಕೆ ಒಬ್ಬ ಶಿಬಿರಾಧಿಪತಿ ಇರುತ್ತಿದ್ದ. ಕೆಲ ಶಿಬಿರಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಮುಖರು ಶಿಬಿರಾಧಿಪತಿಗಳಾಗಿದ್ದರು. ಅವರಲ್ಲಿ ಸರದಾರ ಶರಣಗೌಡ ಇನಾಮದಾರ, ಕೋಳೂರು ಮಲ್ಲಪ್ಪ, ಬ್ಯಾರಿಸ್ಟರ್ ರಾಜಾ ವೆಂಕಟಪ್ಪ ನಾಯಕ್, ವೀರೂಪಾಕ್ಷಪ್ಪ ಗೌಡ, ದತ್ತಾತ್ರೇಯ ಅವರಾದಿ, ನಾರಾಯಣರಾವ ಕಾನಿಹಾಳ, ಅಳವಂಡಿ ಶಿವಮೂರ್ತಿ ಸ್ವಾಮಿ, ಡಾ.ಚುರ್ಚಿಹಾಳ ಮಠ, ರಾಮಚಂದ್ರಪ್ಪ ವೀರಪ್ಪ ಮುಂತಾದ ಪ್ರಮುಖರಿದ್ದರು.
ಶಿಬಿರಗಳ ಮೂಲಕ 1948ರ ಜನವರಿಯಲ್ಲಿ ಇಟಗಿ ಸುತ್ತಮುತ್ತಲಿನ 69 ಹಳ್ಳಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಸ್ವಾತಂತ್ರ್ಯ ಘೋಷಿಸಿದರು. ಶಿಬಿರಗಳ ಮೂಲಕ ಹೋರಾಟಗಳು ಯಶಸ್ಸಿನತ್ತ ಸಾಗಿದವು.
ಒಂದೆಡೆ ಹೋರಾಟಗಾರರು ತಮ್ಮ ಹೋರಾಟ ತೀವ್ರಗೊಳಿಸುತ್ತಿದ್ದಂತೆ ಮತ್ತೊಂದೆಡೆ ಭಾರತ ಸರಕಾರ ನಿಜಾಮ ಮೀರ್ ಉಸ್ಮಾನ್ ಅಲಿಖಾನ್‍ನಿಗೆ ಎಚ್ಚರಿಕೆ ನೀಡಿ ತಕ್ಷಣದಿಂದಲೇ ಹಿಂಸಾಕೃತ್ಯ ನಿಲ್ಲಿಸಲು ಮತ್ತು ಸಂಸ್ಥಾನವನ್ನು ಭಾರತದಲ್ಲಿ ವಿಲೀನಗೊಳಿಸಲು ಎಚ್ಚರಿಕೆ ನೀಡಿದರು.
ಎಚ್ಚರಿಕೆ ಫಲಕಾರಿಯಾಗದ ಕಾರಣ ಅಂದಿನ ಗೃಹಮಂತ್ರಿ ಸರದಾರ ವಲ್ಲಭಭಾಯಿ ಪಟೇಲ್ ಸೇನಾ ಕಾರ್ಯಾಚರಣೆಗೆ ಆದೇಶ ನೀಡಿದರು. ಹೈದರಾಬಾದ್ ರಾಜ್ಯದ ನಾಲ್ಕು ದಿಕ್ಕುಗಳಿಂದ ಜನರಲ್ ಚೌಧರಿ ನೇತೃತ್ವದಲ್ಲಿ ಭಾರತೀಯ ಸೈನ್ಯ ಮುತ್ತಿಗೆ ಹಾಕಿತು. 1948 ಸೆಪ್ಟೆಂಬರ್ 13ರಂದು ಹೈದರಾಬಾದ್‍ನ್ನು ಸುತ್ತುವರಿದ ಭಾರತದ ಸೈನ್ಯ ಸತತ ಐದು ದಿನ ಕಾರ್ಯಾಚರಣೆ ಮುಂದುವರಿಸಿತು. ಸೆ.17ರಂದು ಸಂಜೆ 4ಕ್ಕೆ ನಿಜಾಮ ಹೈದರಾಬಾದ್ ಸಂಸ್ಥಾನವನ್ನು ಭಾರತದ ಒಕ್ಕೂಟಕ್ಕೆ ಸೇರ್ಪಡೆ ಮಾಡುವುದಾಗಿ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದ. ಅಂದಿನಿಂದಲೇ ‘ಅಸಫಿಯಾ’ ಧ್ವಜ ಕೆಳಗಿಳಿಸಿ ಭಾರತದ ‘ತ್ರಿವರ್ಣ’ ಧ್ವಜ ಹಾರಾಡತೊಡಗಿತು.
1995ರ ನಂತರ ಕಲ್ಯಾಣ ಕರ್ನಾಟಕ ಪ್ರದೇಶದ ಜನತೆಗೆ ತಮ್ಮ ಸ್ವಾತಂತ್ರ್ಯ ಹೋರಾಟದ ಪ್ರತ್ಯೇಕತೆ, ಅನನ್ಯತೆಗಳು ಗಮನಕ್ಕೆ ಬಂದವು. 1995ರ ನಂತರ ವಿಮೋಚನಾ ದಿನ ಆಚರಿಸಲು ಆರಂಭಿಸಿದರು.
ಈ ಜಾಗೃತಿಯ ಹಿಂದೆ ಅನೇಕ ಸಂಘಟನೆಗಳ, ಇತಿಹಾಸಕಾರರ ಜ್ಞಾನ ಜಾಗರಣವಿದೆ. 2002-03ರಲ್ಲಿ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ, ಈ ದಿನವನ್ನು ಸಂಭ್ರಮದಿಂದ ಆಚರಿಸಲು ತಿರ್ಮಾನಿಸಿತು.
ಈ ಭಾಗಕ್ಕೆ ಸ್ವಾತಂತ್ರ್ಯ ಲಭಿಸಿ 72ವರ್ಷ ಕಳೆದರೂ ಕರ್ನಾಟಕದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ತುಂಬಾ ಹಿಂದಿದೆ. ಈ ಭಾಗದ ಅನೇಕ ನೀರಾವರಿ ಯೋಜನೆಗಳಿಗೆ ಸಮಯೋಚಿತ ಹಣ ಮಂಜೂರಾಗದೆ ಬಹಳಷ್ಟು ಅಪೂರ್ಣವಾಗಿಯೇ ಉಳಿದಿವೆ. ಈ ಕಾರಣಕ್ಕಾಗಿಯೇ ನೀರಾವರಿಯಿಂದ ಈ ಪ್ರದೇಶ ವಂಚಿತಗೊಂಡು, ಬರದ ನಾಡಾಗಿ ಉಳಿದಿದೆ.
ಮೈಸೂರು ಸೀಮೆ ಅರಸರಂಥ ದೂರದೃಷ್ಟಿಯ ದೊರೆಗಳನ್ನೂ ದಿವಾನರನ್ನೂ ಪಡೆದು ಯೋಜನೆಗಳಿಂದ ಪರಿಪುಷ್ಟವಾಗಿ ಶ್ರೀಮಂತವಾದಂತೆ, ಈ ಭಾಗ ಆಗಲಿಲ್ಲ .ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಜನತೆಗೆ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳು, ವಿಶೇಷ ಅನುದಾನಗಳನ್ನು ರಾಜ್ಯ, ಕೇಂದ್ರ ಸರ್ಕಾರಗಳು ನೀಡುತ್ತಿವೆ. ಅಲ್ಲದೇ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದೆ. ಕೇಂದ್ರ ಸರ್ಕಾರ 371 ರಿ ಎಂಬ ವಿಶೇಷ ಸ್ಥಾನಮಾನ ನೀಡಿದೆ, ಇಷ್ಟೆಲ್ಲ ಇದ್ದರೂ ಅಭಿವೃದ್ಧಿ ಎನ್ನುವುದು ಪೂರ್ಣ ಪ್ರಮಾಣದಲ್ಲಿ ಆಗದೇ ಇರುವುದು ದುರದೃಷ್ಟಕರ.