ಮೈಸೂರು: ಪೆನ್‌ಡ್ರೈವ್ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಆರೋಪಿಸಿದರು.
ಮೈಸೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಿ.ಟಿ. ದೇವೇಗೌಡ ಹಾಗೂ ಸಾರಾ ಮಹೇಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಜಿ.ಟಿ ದೇವೇಗೌಡ, ಪೆನ್‌ಡ್ರೈವ್ ಹಂಚಿಕೆ ಮಾಡಲು ಚೆನ್ನೈನ ಕಂಪನಿಯೊಂದರಲ್ಲಿ 3 ಕೋಟಿ ರೂ.ಗೆ ಪೆನ್‌ಡ್ರೈವ್ ಖರೀದಿಸಿದ್ದಾರೆ ಎಂದು ಆರೋಪ ಮಾಡಿದರು.
ಆಸ್ಟ್ರೇಲಿಯಾ ಪ್ರಯೋಗಾಲಯದಲ್ಲಿ ಯಾವುದನ್ನ ಸೇರಿಸಬೇಕು ಎಂಬುದನ್ನ ತಿಳಿದು ಸೇರಿಸಿ ಸಿನಿಮಾ ಮಾಡಿದಂತೆ ಮಾಡಿದ್ದಾರೆ. ಅಲ್ಲಿಂದ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅಂತಾರಾಷ್ಟ್ರೀಯ ಜಾಲ ಸೇರಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದರು.
ಎಸ್‌ಐಟಿ ತನಿಖೆ ರದ್ದಾಗಬೇಕು, ಈ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಈಗಿರುವ ಎಸ್‌ಐಟಿಯಿಂದ ಏನೂ ಕಂಡುಹಿಡಿಯಲು ಆಗೋದಿಲ್ಲ. ಪೆನ್‌ಡ್ರೈವ್ ಯಾರು ರಿಲೀಸ್ ಮಾಡಿದರು ಅನ್ನೋ ಬಗ್ಗೆ ತನಿಖೆ ನಡೆಯುತ್ತಿಲ್ಲ. ಒಂದು ಪಕ್ಷದ ಮೇಲೆ ಗದಾಪ್ರಹಾರ ಮಾಡುವ ಕೆಲಸ ಆಗುತ್ತಿದೆ ಎಂದು ಜಿಟಿಡಿ ಕಿಡಿ ಕಾರಿದರು.
ಜೆಡಿಎಸ್ ಮುಗಿಸಲು ಸಿಎಂ, ಡಿಸಿಎಂ ಮುಂದಾಗಿದ್ದಾರೆ. ಈ ಪೆನ್‌ಡ್ರೈವ್ ಕೇಸ್ ಹಿಂದೆ ಅಂತಾರಾಷ್ಟ್ರೀಯ ಜಾಲವೇ ಇದೆ. ಅವರನ್ನ ತನಿಖೆ ಮಾಡುವುದಕ್ಕೆ ಕರ್ನಾಟಕ ಪೊಲೀಸರಿಂದ ಸಾಧ್ಯವಿಲ್ಲ. ಸಿಬಿಐ ತನಿಖೆ ಬಿಟ್ಟರೆ ಬೇರೆ ಯಾವುದೇ ತನಿಖೆಯಿಂದ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ಜಿಟಿಡಿ ಹೇಳಿದರು.