ವಿಧಾನಪರಿಷತ್ ಚುನಾವಣೆಯಲ್ಲೂ ಜೆಡಿಎಸ್ ಜತೆ ಮೈತ್ರಿ: ಬಿಎಸ್ ವೈ

ಮೈಸೂರು: ರಾಜ್ಯದಲ್ಲಿ ಜೆ.ಡಿ.ಎಸ್ ಬಿಜೆಪಿ ಮೈತ್ರಿ ಮುಂದುವರೆಯುತ್ತದೆ. ಮೈತ್ರಿಗೆ ಯಾವುದೆ ಭಂಗವಾಗುವುದಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ ಚುನಾವಣೆಯಲ್ಲಿ ಕೂಡಾ ಮೈತ್ರಿ ಇರುತ್ತದೆ ಎಂದು ಹೇಳಿದರು.

ಜೆಡಿಎಸ್ ಗೆ 2 ಸ್ಥಾನ ಬಿಟ್ಟುಕೊಟ್ಟು ನಾವು 4 ಸ್ಥಾನದಲ್ಲಿ ಸ್ಪರ್ಧೆ ಮಾಡುತ್ತೇವೆ, ಎಲ್ಲಿ ಬಿಟ್ಟುಕೊಡಬೇಕು ಎಂಬುದರ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎಂದು ಬಿ ಎಸ್ ವೈ ತಿಳಿಸಿದರು.

ನರೇಂದ್ರ ಮೋದಿಯವರು 400 ಕ್ಕು ಹೆಚ್ಚು ಸ್ಥಾನ ಗೆದ್ದು ಮತ್ತೆ ಪ್ರಧಾನಿಯಾಗುತ್ತಾರೆ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಇದೂ ಕೂಡಾ ಅಷ್ಟೆ ಸತ್ಯ ಎಂದು ಭವಿಷ್ಯ ನುಡಿದರು.

ನಾವು ರಾಜ್ಯದಲ್ಲಿ ಕನಿಷ್ಠ 24-25 ಸ್ಥಾ‌ ಗೆಲ್ಲುತ್ತೇವೆ ಎಂದು ವಿಶ್ವಾಸದಿಂದ ಹೇಳಿದ ಯಡಿಯೂರಪ್ಪ,ಕಾಂಗ್ರೆಸ್ ನವರು ಏನೇ ಹೇಳಿದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ನಲ್ಲಿ ಪ್ರಧಾನಿಯಾಗುವ ಯೋಗ್ಯತೆ ಯಾರಿಗಿದೆ ಎಂದು ಪ್ರಶ್ನಿಸಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಬೇರೆ ಚರ್ಚೆಯಾಗಬಹುದು. ಆದರೆ ಮೋದಿಯವರು ಪ್ರಧಾನಿಯಾಗಬೇಕು ಎಂಬುದು ನಮ್ಮೆಲ್ಲರ ಅಭಿಪ್ರಾಯ ಎಂದರು.

ರಾಜ್ಯದಲ್ಲಿ ಬೀಕರ ಬರಗಾಲ ಬಂದಿದೆ. ಕೆರೆಕಟ್ಟೆ ಬತ್ತಿಹೋಗಿದೆ, ರಾಜ್ಯ ಸರ್ಕಾರ ಸಾಲಮನ್ನ ಮಾಡಿ ರೈತರಿಗೆ ನೆರವಾಗಬೇಕು ಎಂದು ಬಿಎಸ್ ವೈ ಒತ್ತಾಯಿಸಿದರು.

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಪಾರದರ್ಶಕವಾಗಿ ನಡೆಯಬೇಕಾದರೆ ಸಿಬಿಐಗೆ ಕೊಡಬೇಕು ಎಂದು ಹೇಳಿದರು.

ಈಶ್ವರಪ್ಪ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳುತ್ತಿದ್ದಂತೆ ಈ ಬಗ್ಗೆ ಮಾತನಾಡಲು ಇಷ್ಟ ಪಡುವುದಿಲ್ಲ,ಆದರೆ ರಾಘವೇಂದ್ರ 2.5 ಲಕ್ಷ ಲೀಡ್ ಗಳಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.