ಕೆಆರ್ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒಂದು ವರ್ಷದಲ್ಲಿ ಸಾಕಷ್ಟು ಕ್ರಮ:ಶ್ರೀವತ್ಸ

ಮೈಸೂರು: ಮೈಸೂರಿನ ಕೆ ಆರ್ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಒಂದು ವರ್ಷದಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇನೆ ಎಂದು ಶಾಸಕ ಟಿ.ಎಸ್ ಶ್ರೀವತ್ಸ ತಿಳಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾವು ಶಾಸಕರಾಗಿ ಒಂದು ವರ್ಷ ಪೂರೈಸಿದ್ದು ಈ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿದರು.

ಕ್ಷೇತ್ರದ ಸಾರ್ವಜನಿಕರೊಂದಿಗೆ ಸತತ ಸಂಪರ್ಕದಲ್ಲಿ ಇರಬೇಕೆಂಬ ಹಿನ್ನೆಲೆಯಲ್ಲಿ ಮನೆಮನೆಗಳಿಗೆ ಪಾದಯಾತ್ರೆ ಮೂಲಕ ತೆರಳಿ ನನ್ನ ದೂರವಾಣಿ ಸಂಖ್ಯೆ ಹಾಗೂ ಆಪ್ತ ಸಹಾಯಕರ ದೂರವಾಣಿ ಸಂಖ್ಯೆ ಮತ್ತು ಕಚೇರಿ ವಿಳಾಸವುಳ್ಳ ಸುಮಾರು 60 ಸಾವಿರಕ್ಕೂ ಹೆಚ್ಚು ಕಾರ್ಡುಗಳನ್ನು ವಿತರಿಸಿ, ಆ ಮೂಲಕ ಹಲವಾರು ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳೊಂದಿಗೆ ಸೇರಿ ಪರಿಹರಿಸಲಾಗಿದೆ ಎಂದು ಹೇಳಿದರು.

ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯ ಲಲಿತಾದ್ರಿಪುರದಲ್ಲಿ 940 ಆಶ್ರಯ ಗುಂಪು ಯೋಜನೆಯಡಿ 940 ಮಂದಿಗೆ ಹಾಗೂ 500 ಮಂದಿ ವರುಣ ಕ್ಷೇತ್ರದ ಜನತೆಗೆ ಈ ಯೋಜನೆ ಅಡಿ ಮನೆಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಲಲಿತಾದ್ರಿಪುರ ಕೆಆರ್ ಕ್ಷೇತ್ರದಲ್ಲಿದ್ದರೂ ವರುಣ ಕ್ಷೇತ್ರದ ವ್ಯಾಪ್ತಿಯಲ್ಲಿಯೂ ಬರುತ್ತದೆ ಹಾಗಾಗಿ ಇಲ್ಲಿ ಎರಡು ಕ್ಷೇತ್ರದ ಫಲಾನುಭವಿಗಳಿಗೆ ಮನೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ,ಅದಕ್ಕಾಗಿ 13 ಎಕರೆ ಜಾಗವನ್ನು ಪಡೆದು 202 ಕೋಟಿ ರೂ. ವೆಚ್ಚದಲ್ಲಿ ಆಶ್ರಯ ಗುಂಪು ಮನೆ ಯೋಜನೆಯನ್ನು ರೂಪಿಸಲಾಗಿದೆ ಎಂದು ವಿವರಿಸಿದರು.

ಈ ಕ್ಷೇತ್ರದ ಪ್ರಮುಖ ಸಮಸ್ಯೆಗಳಲ್ಲಿ ಒಂದಾದ ಸುಯೆಜ್ ಫಾರಂ ಎಕ್ಸೆಲ್ ಪ್ಲಾಂಟ್ ನಲ್ಲಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದ್ದು ಇನ್ನೆರಡು ವರ್ಷದಲ್ಲಿ 7 ಲಕ್ಷ ಟನ್ ಕಸ ತೆರವುಗೊಳಿಸಲಾಗುವುದು ಇದಕ್ಕಾಗಿ 60 ಕೋಟಿ ರೂಗಳ ಟೆಂಡರ್ ನೀಡಲಾಗಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕೆಆರ್ ಕ್ಷೇತ್ರದಲ್ಲಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮಿಷನರ್ ರಮೇಶ್ ಅವರೊಂದಿಗೆ ಮಾತುಕತೆ ನಡೆಸಿದ್ದು ಮುಂದಿನ ದಿನಗಳಲ್ಲಿ ಇಂತಹ ವರ್ತನೆಗಳು ನಡೆಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.

ಒಂದು ವೇಳೆ ರೌಡಿ ಚಟುವಟಿಕೆಗಳು ಮುಂದುವರಿದಿದ್ದೇ ಆದಲ್ಲಿ ಆಯಾ ಠಾಣೆಯ ಇನ್ಸ್‌ಪೆಕ್ಟರ್ ಗಳನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಆಯುಕ್ತರಲ್ಲಿ ಮನವಿ ಮಾಡಿದ್ದೇನೆ ಎಂದು ಶ್ರೀವತ್ಸ ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ನನ್ನ ವೇಗಕ್ಕೆ ಸ್ಪಂದಿಸುತ್ತಿಲ್ಲ ಹಾಗಾಗಿ ಸೂಕ್ತವಾಗಿ ಕೆಲಸ ಮಾಡದವರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವಂತೆ ಪಾಲಿಕೆ ಆಯುಕ್ತರಲ್ಲಿ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರದಲ್ಲಿ ತಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ ಶಾಸಕ ಶ್ರೀವತ್ಸ, ಕೆಆರ್ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ ಹಣವನ್ನು ಬೇರೆ ಕ್ಷೇತ್ರಕ್ಕೆ ಪಾಲಿಕೆ ಆಯುಕ್ತರು ವರ್ಗಾವಣೆ ಮಾಡಿದ್ದು ಈ‌ ಬಗ್ಗೆ ವಿಧಾನಸಭೆಯಲ್ಲಿ ಸ್ಪೀಕರ್ ಅವರ ಗಮನ ಸೆಳೆದೆ. ಕೂಡಲೇ ಒಂದು ಕ್ಷೇತ್ರಕ್ಕೆ ಮೀಸಲಾದ ಹಣವನ್ನು ಬೇರೊಂದು ಕ್ಷೇತ್ರಕ್ಕೆ ವರ್ಗಾಯಿಸಬಾರದೆಂದು ಅವರು ಸೂಚಿಸಿದರು,ಹಾಗಾಗಿ ಈ ಹಣ ಮುಂದಿನ ದಿನಗಳಲ್ಲಿ ತಮ್ಮ ಕ್ಷೇತ್ರಕ್ಕೆ ವಾಪಸ್ಸಾಗಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರು ಗಳಾದ ಶಿವಕುಮಾರ್, ಸುನಂದ ಪಾಲನೇತ್ರ ಹಾಗೂ ಮುಖಂಡರುಗಳಾದ ಜೋಗಿ ಮಂಜು, ಅರಸು ಮತ್ತಿತರರು ಉಪಸ್ಥಿತರಿದ್ದರು.