ಮೈಸೂರು: ರಘುಪತಿ ಭಟ್ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಅವರ ಜೊತೆ ನಮ್ಮ ಮುಖಂಡರು ಮಾತುಕತೆ ನಡೆಸಿ ಎಲ್ಲಾ ಸರಿಪಡಿಸುತ್ತಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಪರಿಷತ್ ಚುನಾವಣೆಗೆ ಮೈತ್ರಿಯ ಬಲವಿದೆ ಹಾಗಾಗಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಮಪತ್ರ ಹಿಂಪಡೆಯಲು ಇನ್ನೂ ಮೂರು ದಿನ ಕಾಲಾವಕಾಶ ಇದೆ, ಅಷ್ಟರಲ್ಲಿ ಎಲ್ಲವನ್ನೂ ಸರಿ ಮಾಡುತ್ತಾರೆ,ರಘುಪತಿಭಟ್ ಅವರ ಮನವೊಲಿಸು ತ್ತಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಈಶ್ವರಪ್ಪ ಬಂಡಾಯದಿಂದ ಯಾವುದೇ ತೊಂದರೆಯಾಗಿಲ್ಲ, ಕಳೆದ ಭಾರಿಗಿಂತಲೂ ಹೆಚ್ಚಿನ ಮತಗಳಿಂದ ಗೆಲ್ಲುತ್ತೇನೆ ಎಂದು ರಾಘವೇಂದ್ರ ವಿಶ್ವಾಸದಿಂದ ನುಡಿದರು.
ಚುನಾವಣಾ ಆಯೋಗಕ್ಕೆ ಈಶ್ವರಪ್ಪ ದೂರು ಕೊಟ್ಟಿರುವುದು ನನಗೆ ಗೊತ್ತಿಲ್ಲ, ಫಲಿತಾಂಶ ಬರಲಿ ನಂತರ ಮಾತನಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಸಂಸದ ಉತ್ತರಿಸಿದರು.
ಈಶ್ವರಪ್ಪರನ್ನ ಮತ್ತೆ ಪಕ್ಷಕ್ಕೆ ಕರೆತರುವ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ,ಎಲ್ಲವನ್ನು ರಾಜ್ಯ ಮತ್ತು ಕೇಂದ್ರ ನಾಯಕರು ಮಾಡುತ್ತಾರೆ ಎಂದು ತಿಳಿಸಿದರು.
ಬಿಜೆಪಿ ಅಂದುಕೊಂಡಂತೆ ದೇಶದಲ್ಲಿ 400 ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ, ಈ ಬಗ್ಗೆ ಅಂಕಿ ಅಂಶಗಳೇ ಹೇಳುತ್ತಿವೆ ಎಂದರು.
ಪೆನ್ ಡ್ರೈವ್ ಪ್ರಕರಣದಿಂದ ವಿಧಾನ ಪರಿಷತ್ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವು ದಿಲ್ಲ ಎಂದು ಇದೇ ವೇಳೆ ಬಿ.ವೈ ರಾಘವೇಂದ್ರ ಹೇಳಿದರು.
ಈಗಾಗಲೇ ಪೆನ್ ಡ್ರೈವ್ ಪ್ರಕರಣಕ್ಕೆ ಜೆಡಿಎಸ್ ನಾಯಕರು ಉತ್ತರ ಕೊಟ್ಟಿದ್ದಾರೆ. ಆ ಪ್ರಕರಣ ಕೋರ್ಟ್ ನಲ್ಲಿದೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ತಿಳಿಸಿದರು.
ಮೈಸೂರಿಗೆ ಆಗಮಿಸಿದ್ದ ವೇಳೆ ಬಿ.ವೈ.ರಾಘವೇಂದ್ರ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು.