ಮೈಸೂರು: ವ್ಯವಹಾರದ ನಿಮಿತ್ತ ಮುಂಗಡ ಹಣಕ್ಕೆ ಭದ್ರತೆಗಾಗಿ ನೀಡಿದ್ದ ಚೆಕ್ ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ಆರೋಗ್ಯಾಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮೈಸೂರು ಮಹಾನಗರ ಪಾಲಿಕೆ ಹಿರಿಯ ಆರೋಗ್ಯಾಧಿಕಾರಿ ವಿರುದ್ದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಮೈಸೂರಿನ ಸರಸ್ವತಿಪುರಂ ನಿವಾಸಿ ಮೀರಾ ಎಂಬುವರು ಆರೋಗ್ಯಾಧಿಕಾರಿ ಸೇರಿದಂತೆ ಇಬ್ಬರ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯ ಹಿರಿಯ ಆರೋಗ್ಯಾಧಿಕಾರಿ ವೆಂಕಟೇಶ್ ಹಾಗೂ ಹಾಸನ ನಿವಾಸಿ ಕೇಶವಮೂರ್ತಿ ಎಂಬುವರ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ.
ಭದ್ರತೆಗಾಗಿ ನೀಡಿದ್ದ ಚೆಕ್ ಮೇಲೆ 4.5 ಲಕ್ಷ ನಮೂದಿಸಿಕೊಂಡು ಬೌನ್ಸ್ ಮಾಡಿ ವಂಚಿಸಲು ಯತ್ನಿಸಿದ ಇಬ್ಬರ ವಿರುದ್ದ ಮೀರಾ ರವರು ನ್ಯಾಯಾಲಯದ ಮೊರೆ ಹೋಗಿದ್ದರು.
ಹಾಗಾಗಿ ಮೈಸೂರಿನ ಜೆಎಂ ಎಫ್ ಸಿ ನ್ಯಾಯಾಲಯ ಇಬ್ಬರ ವಿರುದ್ದ ವಂಚನೆ ಪ್ರಕರಣ ದಾಖಲಿಸುವಂತೆ ಸರಸ್ವತಿಪುರಂ ಠಾಣಾ ಪೊಲೀಸರಿಗೆ ಆದೇಶಿಸಿದೆ.
ಸರಸ್ವತಿಪುರಂ ನಲ್ಲಿ ಮೀರಾ ಅವರು ಅನ್ನಪೂರ್ಣ ಆಫ್ ಸೆಟ್ ಮುದ್ರಣಾಲಯ ಇಟ್ಟುಕೊಂಡು ವಹಿವಾಟು ನಡೆಸುತ್ತಿದ್ದಾರೆ.
ಈ ವೇಳೆ ಮೀರಾ ಅವರಿಗೆ ಆರೋಗ್ಯಾಧಿಕಾರಿ ವೆಂಕಟೇಶ್ ಪರಿಚಯವಾಗಿ ಕೆಲವು ಸ್ಟೇಷನರಿ ಪದಾರ್ಥಗಳನ್ನ ಸರಬರಾಜು ಮಾಡುವಂತೆ ಮನವಿ ಮಾಡಿದ್ದಾರೆ.2021 ರಿಂದ ಇಬ್ಬರ ನಡುವೆ ಸಾಕಷ್ಟು ವಹಿವಾಟು ನಡೆದಿದೆ.
2018 ರಲ್ಲಿ ವೆಂಕಟೇಶ್ ಕೆಲವು ರಿಜಿಸ್ಟರ್ ಗಳನ್ನ ಮುದ್ರಣ ಮಾಡಿಕೊಡುವಂತೆ ಮೀರಾ ರವರಿಗೆ ತಿಳಿಸಿದ್ದಾರೆ.ಇದಕ್ಕಾಗಿ ಮೀರಾರವರಿಗೆ ಮುಂಗಡ ಹಣವನ್ನೂ ಸಹ ನೀಡಿದ್ದಾರೆ.
ಮುಂಗಡ ಹಣದ ಭದ್ರತೆಗಾಗಿ ಮೀರಾ ಸಹಿ ಮಾಡಿದ ಚೆಕ್ ನೀಡಿದ್ದಾರೆ.ವಹಿವಾಟು ಮುಗಿದ ನಂತರ ಚೆಕ್ ವಾಪಸ್ ನೀಡುವಂತೆ ಮೀರಾ ಕೇಳಿದಾಗ ವೆಂಕಟೇಶ್ ಇಲ್ಲಸಲ್ಲದ ನೆಪವೊಡ್ಡಿ ಕ್ಯಾತೆ ತೆಗೆದು ಭದ್ರತೆಗಾಗಿ ನೀಡಿದ ಚೆಕ್ ದುರುಪಯೋಗ ಪಡಿಸಿದ್ದಾರೆ.
ಹಾಸನದ ಕೇಶವಮೂರ್ತಿ ಎಂಬುವರಿಗೆ ಮೀರಾ ಅವರ ಚೆಕ್ ನೀಡಿ 4.5 ಲಕ್ಷ ಬರೆದುಕೊಂಡು ಬೌನ್ಸ್ ಮಾಡಿಸಿದ್ದಾರೆ.ನನ್ನನ್ನು ವಂಚಿಸುವ ಉದ್ದೇಶದಿಂದ ಇಂತಹ ಸಂಚು ನಡೆಸಿರುವುದಾಗಿ ಮೀರಾ ರವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಮೀರಾ ಅವರಿಗೆ ವಂಚನೆ ಮಾಡಿರುವ ವಿಚಾರ ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನಲೆ ವೆಂಕಟೇಶ್ ಹಾಗೂ ಕೇಶವಮೂರ್ತಿ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ.