ಪ್ರಜ್ವಲ್ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಎಸ್‌ಐಟಿ ಬಂಧಿಸಲಿದೆ:ಪರಮೇಶ್ವರ್

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಎಸ್‌ಐಟಿ ಅಧಿಕಾರಿಗಳು ಬಂಧಿಸುತ್ತಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ವಾರೆಂಟ್ ಇರುವುದರಿಂದ ಪ್ರಜ್ವಲ್ ರೇವಣ್ಣ ಅವರು ಬರುತ್ತಿದ್ದಂತೆ ಅರೆಸ್ಟ್ ಮಾಡಲೇಬೇಕಿದೆ, ಎಸ್‌ಐಟಿಯವರು ಅದನ್ನ ಗಮನಿಸ್ತಾರೆ, ವಾರೆಂಟ್ ಇರುವುದರಿಂದ ಅರೆಸ್ಟ್ ಮಾಡ್ತಾರೆ ಎಂದು ಹೇಳಿದರು.

ಎಸ್‌ಐಟಿ ನವರು ಕಾಯುತ್ತಿದ್ದಾರೆ. ಏರ್‌ಪೋರ್ಟ್‌ಗೆ ಬಂದ ಕೂಡಲೇ ಅರೆಸ್ಟ್ ನಂತರ ಅವರ ಹೇಳಿಕೆಗಳು ಮತ್ತಿತರ ಪ್ರಕ್ರಿಯೆ ಶುರು ಆಗುತ್ತೆ ಎಂದು ತಿಳಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಗೃಹಸಚಿವರು, ಚಂದ್ರಶೇಖರ್ ಸಾವಿನ ಕುರಿತು ಸಿಐಡಿ ತನಿಖೆ ನಡೆಯುತ್ತಿದೆ. ಈಗಾಗಲೇ ಆ ಇಲಾಖೆಯಿಂದ ದೂರು ಬಂದಿದೆ,187 ಕೋಟಿ ಹಣ ವರ್ಗಾವಣೆ ಆಗಿದೆ ಅಂತಾ ಒಬ್ಬೊಬ್ಬರು ಒಂದು ಅಮೌಂಟ್ ಹೇಳ್ತಿದ್ದಾರೆ. 84 ಕೋಟಿ, 88 ಕೋಟಿ, 94 ಕೋಟಿ ಅಂತೆಲ್ಲಾ ಹೇಳ್ತಿದ್ದಾರೆ. ತನಿಖೆ ನಡೆಯುತ್ತಿದೆ, ಸತ್ಯ ಹೊರ ಬರುತ್ತೆ. ಬೇರೆ ಅಕೌಂಟ್‌ಗಳಿಗೆ ಹಣ ಹೋಗಿದೆ ಅಂತಾ ಮಾಹಿತಿ ಇದೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಬಿಜೆಪಿ ಯವರು ಎಲ್ಲದ್ದಕ್ಕೂ ರಾಜೀನಾಮೆ ಕೇಳ್ತಾಲೆ ಇರುತ್ತಾರೆ, ಯಾರ ಸೂಚನೆ ಮೇರೆಗೆ ಹಣ ಹೋಗಿದೆ ಅಂತಾ ತನಿಖೆ ನಡೆಯುತ್ತಿದೆ,ಡೆತ್‌ನೋಟ್‌ನಲ್ಲಿ ಸಚಿವರು ಅಂತಾ ಬರೆದಿದ್ದಾರೆ,ಅದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ನೇರವಾಗಿ ಎಲ್ಲಿಯೂ ಸಚಿವರ ಹೆಸರು ಹೇಳಿಲ್ಲ,ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಸಚಿವರ ಹೆಸರು ಹೇಳಿದ್ದರಿಂದಲೇ ನಾವು ರಾಜೀನಾಮೆ ಕೇಳಿದ್ದೆವು ಎಂದು ಪರಮೇಶ್ವರ್ ಹೇಳಿದರು.