ದೂರು ಕೊಡುವ ಸಂತ್ರಸ್ತೆಯರಿಗೆ ರಕ್ಷಣೆ ಕೊಡುತ್ತೇವೆ: ಪರಮೇಶ್ವರ್

ಬೆಂಗಳೂರು: ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಪ್ರಕರಣದ ಸಂತ್ರಸ್ತೆಯರು ಪೊಲೀಸರು, ಎಸ್‍ಐಟಿ ಮುಂದೆ  ದೈರ್ಯವಾಗಿ ದೂರು ಹೇಳಿಕೊಳ್ಳಬೇಕು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ

ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಹಿಂದೆಯೇ ಅವರಿಗೆ ರಕ್ಷಣೆ ಕೊಡುವುದಾಗಿ ಹೇಳಿದ್ದೇವೆ ಹಾಗಾಗಿ ದೈರ್ಯವಾಗಿ ಮುಂದೆ‌ ಬನ್ನಿ ಎಂದು ಮನವಿ ಮಾಡಿದರು.

ಪ್ರಜ್ವಲ್ ರೇವಣ್ಣ ಅವರು ನಿನ್ನೆ ರಾತ್ರಿ ಸುಮಾರು 12.50 ರ ಹೊತ್ತಿಗೆ ಬೆಂಗಳೂರಿಗೆ ಬಂದಿದ್ದಾರೆ, ಅವರ ವಿರುದ್ಧ ಬಂಧನದ ವಾರಂಟ್ ಇತ್ತು, ಈಗ ಅವರ ಬಂಧನವಾಗಿದೆ, ಅಧಿಕಾರಿಗಳು ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಿದ್ದಾರೆ‌ ಎಂದು ತಿಳಿಸಿದರು.

ಅಧಿಕಾರಿಗಳಿಗೆ ಅವರು ಸಹಕಾರ ಕೊಟ್ಟಿದ್ದಾರೋ ಇಲ್ಲವೋ ಎಂಬುದು ಗೊತ್ತಿಲ್ಲ, ಸಹಜವಾಗಿ ಅವರು ತನಿಖೆಗೆ ಸಹಕಾರ ಕೊಡಬೇಕು ಎಂದು ಹೇಳಿದರು.

ಬಂಧನ ವಿಳಂಬವಾಯ್ತಲ್ಲವೆ ಎಂಬ ಪತ್ರಕರ್ತರ ಪ್ರಶ್ನೆಗೆ, ನಮ್ಮ ದೇಶದಲ್ಲೇ ಅಥವಾ ರಾಜ್ಯದಲ್ಲಿಯೇ ಇದ್ದಿದ್ದರೆ ಇಷ್ಟರಲ್ಲೇ ಬಂಧನ ಆಗಿರುತ್ತಿತ್ತು, ಹೊರ ದೇಶದಲ್ಲಿ ಇದ್ದರು, ಅಲ್ಲಿಗೆ ನಮ್ಮ ಇನ್ಸ್‌ಪೆಕ್ಟರ್ ಕಳುಹಿಸಿ ಬಂಧಿಸಲು ಸಾಧ್ಯವಿರಲಿಲ್ಲ,ಇದು ಬೇರೆ ರೀತಿ ಆದರೆ, ಅವರ ರಾಜತಾಂತ್ರಿಕ ಪಾಸ್‍ಪೋರ್ಟ್ ರದ್ದಾಗುತ್ತದೆ ಎಂಬುದನ್ನ ತಿಳಿದುಕೊಂಡೇ ಅವರು ಮರಳಿ ಬಂದಿರಬಹುದು ಎಂದು ಪರಮೇಶ್ವರ್ ತಿಳಿಸಿದರು.

ಮೊಬೈಲ್ ಕಳೆದು ಹೋಗಿದೆ ಎಂದು ಪ್ರಜ್ವಲ್ ಹೇಳುತ್ತಿದ್ದಾರಲ್ಲಾ ಎಂಬ ಮತ್ತೊಂದು ಪ್ರಶ್ನೆಗೆ,  ಆ ವಿಚಾರ ನನಗೆ ಗೊತ್ತಿಲ್ಲ ಎಂದರು.