ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು 42ನೇ ಎಸಿಎಂಎಂ ಕೋರ್ಟ್ 6 ದಿನ ಎಸ್ಐಟಿ ಕಸ್ಟಡಿಗೆ ನೀಡಿದೆ.
ಜರ್ಮನಿಯ ಮ್ಯೂನಿಕ್‌ನಿಂದ ತಡರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ಅವರನ್ನು ಪೊಲೀಸರು ಬಂಧಿಸಿ ಸಿಐಡಿ, ಎಸ್‌ಐಟಿ ಕಚೇರಿಗೆ ಕರೆ ತಂದರು.
ಎಸ್‌ಐಟಿ ಕಚೇರಿಯಲ್ಲೇ ರಾತ್ರಿ ಕಳೆದ ಪ್ರಜ್ವಲ್ ಅವರನ್ನು ಇಂದು ಬೆಳಗ್ಗೆ ವೈದ್ಯಕೀಯ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಆಸ್ಪತ್ರೆ ತುರ್ತು ನಿಗಾ ಘಟಕದ ಕಟ್ಟಡದಲ್ಲಿ ಬಿಪಿ, ಶುಗರ್, ಪಲ್ಸ್, ಹಾರ್ಟ್ ರೇಟ್, ಯೂರಿನ್, ಬ್ಲಡ್ ಪರೀಕ್ಷೆ ನಡೆಸಲಾಯಿತು.
ಪರೀಕ್ಷೆಯ ನಂತರ ಪೊಲೀಸರು 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.
ವಿಚಾರಣೆ ವೇಳೆ ಎಸ್‌ಐಟಿ ಅಧಿಕಾರಿಗಳು 15 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.
ಮಧ್ಯಾಹ್ನದ ನಂತರ ದೀರ್ಘ ವಿಚಾರಣೆ ನಡೆಸಿದ ಕೋರ್ಟ್,ಪ್ರಜ್ವಲ್ ರನ್ನು 6 ದಿನ ಎಸ್ಐಟಿ ಕಸ್ಟಡಿಗೆ ನೀಡಿ ಆದೇಶ ಪ್ರಕಟಿಸಿತು.