ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಬೆಂಗಳೂರು: ಕೆ.ಆರ್ ನಗರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ.

ಹಾಗಾಗಿ‌ ಅವರು ಯಾವುದೇ ಕ್ಷಣದಲ್ಲಿ ಬಂಧನಕ್ಕೆ ಒಳಗಾಗುವ ಸಾಧ್ಯವಾಗಬಹುದು.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರಿದ್ದ ಪೀಠ ಐಪಿಸಿ ಸೆಕ್ಷನ್‌ 120 ಬಿ ಕ್ರಿಮಿನಲ್‌ ಪಿತೂರಿ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದಾಗಿನಿಂದ ಭವಾನಿ ರೇವಣ್ಣ ನಾಪತ್ತೆಯಾಗಿದ್ದಾರೆ, ಜೈಲಿನಿಂದ ರಿಲೀಸ್ ಆದ ಪತಿ ರೇವಣ್ಣ ಅವರನ್ನೂ ಭೇಟಿ ಆಗಿಲ್ಲ,ಸದ್ಯ ಅಜ್ಞಾತ ವಾಸಿಯಾಗಿರುವ ಭವಾನಿ ರೇವಣ್ಣಗೆ ವಿಶೇಷ ತನಿಖಾ ತಂಡ ನೋಟಿಸ್ ನೀಡಿದ್ದು, ನಾಳೆ ತನಿಖೆ ಎದುರಿಸುವಂತೆ ಸೂಚಿಸಿದೆ.

ಮೇ 15ರಂದು ನೀಡಿದ ನೋಟಿಸ್‌ಗೆ ಸ್ಪಷ್ಟನೆ ನೀಡುವುದಾಗಿ ತಿಳಿಸಿದ್ದಿರಿ, ಆದರೆ ಈವರೆಗೂ ನೋಟಿಸ್‌ಗೆ ನೀವು ಉತ್ತರಿಸಿಲ್ಲ. ಈ ಪ್ರಕರಣದಲ್ಲಿ ನಿಮ್ಮ ವಿಚಾರಣೆಯ ಅವಶ್ಯಕತೆ ಇದೆ. ಹೀಗಾಗಿ ಜೂನ್ 1ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ ಐದು ಗಂಟೆ ಒಳಗೆ ಮಹಿಳಾ ಅಧಿಕಾರಿಗಳೊಂದಿಗೆ ನಿಮ್ಮ ಮನೆಗೆ ಬರುತ್ತೇವೆ.

ಈ ವೇಳೆ ನೀವು ಮನೆಯಲ್ಲಿ ಖುದ್ದು ಹಾಜರು ಇರಬೇಕು ಎಂದು ಎಸ್‌ಐಟಿ ತನಿಖಾಧಿಕಾರಿ ಹೇಮಂತ್‌ಕುಮಾರ್ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.