ಸಿ.ಟಿ ರವಿ ಸೇರಿ ಮೂವರಿಗೆ ಬಿಜೆಪಿ ಟಿಕೆಟ್‌ ಘೋಷಣೆ

ಬೆಂಗಳೂರು: ಕರ್ನಾಟಕ ವಿಧಾನ ಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ಸಿ.ಟಿ ರವಿ ಸೇರಿದಂತೆ ಮೂವರಿಗೆ ಟಿಕೆಟ್‌ ಘೋಷಿಸಿದೆ.

ಪರಿಷತ್‌ ಸ್ಥಾನಕ್ಕೆ ಮಾಜಿ ಸಚಿವ ಸಿ.ಟಿ ರವಿ, ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಹಾಗೂ ಮಾಜಿ ಶಾಸಕ ಎಂ.ಜಿ ಮುಳೆ ಅವರಿಗೆ ಟಿಕೆಟ್‌ ಘೋಷಿಸಿದೆ.

ಸೋಮವಾರ ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾದುದರಿಂದ ಅಭ್ಯರ್ಥಿಗಳ  ಪಟ್ಟಿ ಬಿಡುಗಡೆ ಮಾಡಲಾಗಿದೆ.

ಹೈಕಮಾಂಡ್‌ ಕೋಟಾದಿಂದ ಸಿ.ಟಿ ರವಿ, ರಾಜ್ಯ ಬಿಜೆಪಿ ಕೋಟಾದಿಂದ ಎನ್. ರವಿಕುಮಾರ್ ಹಾಗೂ ಆರ್‌ಎಸ್‌ಎಸ್‌ ಕೋಟಾದಿಂದ ಮಾರುತಿರಾವ್ ಗೋವಿಂದರಾವ್ ಮುಳೆ (ಎಂ.ಜಿ ಮುಳೆ) ಅವರಿಗೆ ಟಿಕೆಟ್‌ ನೀಡಲಾಗಿದೆ

ಮಾಜಿ ಶಾಸಕರೂ ಆಗಿರುವ ಎಂ.ಜಿ ಮುಳೆ ಮರಾಠ ಸಮುದಾಯದ ಪ್ರಭಾವಿ ನಾಯಕರು. ಈ ಮೊದಲು ಜೆಡಿಎಸ್‌ನಲ್ಲಿ ಶಾಸಕರಾಗಿದ್ದ ಮುಳೆ ಕಳೆದ ಬಸವಕಲ್ಯಾಣ ಉಪಚುನಾವಣೆ ವೇಳೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಪ್ರಸಕ್ತ ವರ್ಷದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಸೇರ್ಪಡೆಗೊಂಡ ಸಂಸದೆ ಸುಮಲತಾ ಅವರಿಗೆ ಪರಿಷತ್‌ನಲ್ಲಿ ಟಿಕೆಟ್‌ ನೀಡಬಹುದೆಂಬ ಮಾತುಗಳು ಕೇಳಿಬಂದಿತ್ತು.