ನವದೆಹಲಿ: ಅಮುಲ್ ಹಾಲಿನ ದರ ಏರಿಕೆ ಹಿಂದೆಯೇ ಮದರ್ ಡೈರಿ ಕೂಡಾ ಹಸು, ಎಮ್ಮೆ ಹಾಲು ಸೇರಿದಂತೆ ವಿವಿಧ ಮಾದರಿಯ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಿದೆ.
ಇಂದಿನಿಂದಲೇ ನಿಗದಿತ ಬೆಲೆ ಜಾರಿಗೆ ಬರಲಿದೆ ಎಂದು ಮದರ್ ಡೈರಿ ತಿಳಿಸಿದ್ದು ದೆಹಲಿ ಜನತೆಗೆ ಶಾಕ್ ನೀಡಿದೆ.
ಟೋಕನ್ ಮಿಲ್ಕ್ 52 ರೂ. ನಿಂದ 54 ರೂ.ಗೆ ಹೆಚ್ಚಿಸಲಾಗಿದೆ. ಇನ್ನುಳಿದಂತೆ ಟೋನ್ಡ್ ಮಿಲ್ಕ್ (ಟೆಟ್ರಾ ಪ್ಯಾಕ್) 54 ರೂ. ನಿಂದ 56 ರೂ., ಹಸುವಿನ ಹಾಲು 56 ರಿಂದ 58 ರೂ., ಕೆನೆ ಹಾಲು 66 ರೂ. ನಿಂದ 68 ರೂ., ಎಮ್ಮೆ ಹಾಲು 70 ರೂ. ನಿಂದ 72 ರೂ. ಹಾಗೂ ಡಬಲ್ ಟೋನ್ಡ್ ಪ್ಯಾಕೆಟ್ ಹಾಲಿನ ದರ 48 ರೂ. ನಿಂದ 50 ರೂ.ಗಳಿಗೆ ಹೆಚ್ಚಿಸಲಾಗಿದೆ.
ದೆಹಲಿ ಎನ್‌ಸಿಆರ್‌ನಲ್ಲಿ ಪ್ರತಿದಿನ ಸುಮಾರು 35 ಲಕ್ಷ ಲೀಟರ್ ತಾಜಾ ಹಾಲು ಮಾರಾಟ ಮಾಡುತ್ತಿರುವ ಮದರ್ ಡೈರಿ 2023ರ ಫೆಬ್ರವರಿಯಲ್ಲಿ ಕೊನೆಯಬಾರಿಗೆ ಹಾಲಿನ ದರ ಏರಿಕೆ ಮಾಡಿತ್ತು.
ಇತ್ತೀಚೆಗೆ ಕೆಲವೆಡೆ ಬಿಸಿಲಿನ ತಾಪ ಏರಿಕೆಯಿಂದ ಹಾಲಿನ ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಬೆಲೆ ಏರಿಕೆ ಮಾಡಿದ್ದಾಗಿ ಮದರ್ ಡೈರಿ ತಿಳಿಸಿದೆ.