ಕರ್ನಾಟಕದ 4 ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ:ವಾಹನ ಸವಾರರಿಗೆ ಶಾಕ್

ಬೆಂಗಳೂರು: ಕರ್ನಾಟಕದ ನಾಲ್ಕು ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ ಮಾಡಲಾಗಿದ್ದು ವಾಹನ‌ ಸವಾರರಿಗೆ ಹೊರೆ ಗ್ಯಾರಂಟಿ.

ವಾಹನ ಬಳಕೆದಾರರು ಇಂದಿನಿಂದ ಬೆಂಗಳೂರು-ಮೈಸೂರು, ಬೆಂಗಳೂರು-ಹೈದರಾಬಾದ್ ಮತ್ತು ತುಮಕೂರು-ಹೊನ್ನಾವರ ಹೆದ್ದಾರಿ ಮತ್ತು ಹೊಸ ಕೋಟೆ- ದೇವನಹಳ್ಳಿ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ಬಳಸಲು ಶೇ. 3 ರಿಂದ ಶೇ. 25 ರಷ್ಟು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಎನ್ ಹೆಚ್‌ಎಐ ತಿಳಿಸಿದೆ.

ದರ‌ ಹೆಚ್ಚಳ ಏಪ್ರಿಲ್ 1 ರಂದೇ ಜಾರಿಗೆ ಬರಬೇಕಿತ್ತು ಆದರೆ ಲೋಕಸಭೆ ಚುನಾವಣೆ ಇದ್ದುದರಿಂದ ಮುಂದೂಡಲಾಗಿತ್ತು.

ಹೊಸ ಶುಲ್ಕಗಳು ಮಾರ್ಚ್ 31, 2025 ರವರೆಗೆ ಜಾರಿಯಲ್ಲಿರುತ್ತವೆ ಎಂದು‌ ಎನ್ ಹೆಚ್‌ಎಐ ಬೆಂಗಳೂರು ಪ್ರಾದೇಶಿಕ ಅಧಿಕಾರಿ ವಿಲಾಸ್ ಬಿ ಪಿ ಬ್ರಹ್ಮಂಕರ್ ತಿಳಿಸಿದ್ದಾರೆ.

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಬಳಸಲು ಶೇ. 3ರಷ್ಟನ್ನು ಹೆಚ್ಚಿಸಿದರೆ, ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ಬಳಸುವ ವಾಹನಗಳು ಶೇ. 14 ರಷ್ಟು ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ.

ಬೆಂಗಳೂರು-ಮೈಸೂರು ಹೆದ್ದಾರಿ ಬಳಸುವ ಕಾರು, ವ್ಯಾನ್ ಮತ್ತು ಜೀಪ್ ಗಳು ಒಂದು ಬಾರಿಗೆ ರೂ. 330 ಪಾವತಿಸಬೇಕಾಗುತ್ತದೆ. ಬೆಂಗಳೂರು-ನಿಡಘಟ್ಟ ಸೆಕ್ಷನ್ ವರೆಗೂ ರೂ. 170 ಮತ್ತು ನಿಡಘಟ್ಟ-ಮೈಸೂರು ನಡುವಣ ರೂ.160 ರೂ. ನಿಗದಿಪಡಿಸಲಾಗಿದೆ. ಕಣಿಮಿಣಿಕೆ (ಬೆಂಗಳೂರು ನಗರ) ಶೇಷಗಿರಿಹಳ್ಳಿ (ರಾಮನಗರ) ಮತ್ತು ಗಂಗನೂರು (ಮಂಡ್ಯ) ಬಳಿ ಟೋಲ್ ಸಂಗ್ರಹಿಸಲಾಗುತ್ತದೆ.