ಸಚಿವ ನಾಗೇಂದ್ರ ರಾಜೀನಾಮೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ  ಸರ್ಕಾರದ ಮೊದಲ ವಿಕೆಟ್‌ ಪತನವಾಗಿದೆ.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಧಿಸಿದಂತೆ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ.

ಈ ಸಂಬಂಧ  ನಾಗೇಂದ್ರ ಮುಖ್ಯಮಂತ್ರಿಗಳಿಗೆ ಸಂಜೆ ರಾಜೀನಾಮೆ ಸಲ್ಲಿಸಲಿದ್ದಾರೆ.

ಈಗಾಗಲೇ ಪ್ರಕರಣ ಸಂಬಂಧ ಸಿಬಿಐ  ಎಫ್‌ಐಆರ್‌ ದಾಖಲಿಸಿದೆ.

ಗುರುವಾರ ಸಂಜೆ ನಾಗೇಂದ್ರ ಅವರು ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಯಾರೂ ನನ್ನ ಮೇಲೆ ಒತ್ತಡ ಹೇರಿಲ್ಲ. ನನ್ನ ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ. ಇಂದು ಸಂಜೆ ೭.೩೦ರ ನಂತರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅವರಿಗೆ ನನ್ನ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಯಾರಿಗೂ ಮುಜುಗರ ಆಗಬಾರದು ಎಂಬ ಹಿನ್ನೆಲೆಯಲ್ಲಿ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ನಾಗೇಂದ್ರ ತಿಳಿಸಿದರು.

ಎಸ್‌ ಐಟಿ ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ. ನಾನು ಸಚಿವ ಸ್ಥಾನದಲ್ಲಿ ಇದ್ದರೆ ತೊಂದರೆ ಆಗಬಹುದು ಎಂಬ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದರು.

ಈ ಹಗರಣದಲ್ಲಿ ನಾನು ಭಾಗಿ ಆಗಿಲ್ಲ. ತನಿಖೆ ನಂತರ ನಾನು ನಿರ್ದೋಷಿ ಆಗಿ ಹೊರಬರುತ್ತೇನೆ ಎಂದು ನಾಗೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಿಮ್ಮ ಅಳಿಯ ಈ ಹಗರಣದಲ್ಲಿ ಭಾಗಿ ಆಗಿದ್ದಾರೆಂಬ ಆರೋಪ ಕೇಳಿ ಬರುತ್ತಿದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ನಾಗೇಂದ್ರ ಅವರು ಉತ್ತರಿಸಿ, ಇದೆಲ್ಲ ಊಹಾಪೋಹ ಎಂದಷ್ಟೆ ಹೇಳಿದರು.