ಮೈಸೂರು: ಮೈಸೂರಿನ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಸ್ಥಾನ ಪಡೆದಿದೆ.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ್ ಅವರು ಈ ಕುರಿತು ಮಾತನಾಡಿ,ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಮಾಡಿರುವ ಗಮನಾರ್ಹ ಸೇವೆ ಹಾಗೂ ಸಾಧನೆಗಳನ್ನು ಗುರುತಿಸಿ ನಮ್ಮ ವಿಶ್ವವಿದ್ಯಾನಿಲಯಕ್ಕೆ ಟೈಮ್ಸ್ ಹೈಯರ್ ಎಜುಕೇಶನ್ ಪ್ರಥಮ ಸ್ಥಾನ ಘೋಷಿಸಿದೆ
ಎಂದು ಹೇಳಿದರು.
ಟೈಮ್ಸ್ ಹೈಯರ್ ಎಜುಕೇಶನ್ ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು ಸುಸ್ಥಿರ ಅಭಿವೃದ್ಧಿ ಮತ್ತು ಸಾಮಾಜಿಕ ಪ್ರಭಾವವುಳ್ಳ ಹಲವು ವಿಷಯಗಳಲ್ಲಿ ಉತ್ತಮ ಸ್ಥಾನ ಪಡೆದಿದೆ ಎಂದು ತಿಳಿಸಿದರು.
ಸಂಯುಕ್ತ ರಾಷ್ಟ್ರಗಳ ಸಂಸ್ಥೆ ನಿಗದಿಪಡಿಸಿರುವ ಸುಸ್ಥಿರ ಅಭಿವೃದ್ಧಿ ಗುರಿಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಇರುವ ಒಟ್ಟು 17 ಗುರಿಗಳಲ್ಲಿ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದೆ ಎಂದು ಮಂಜುನಾಥ್ ತಿಳಿಸಿದರು.
ನಮ್ಮ ಅಕಾಡೆಮಿಯು ಮಾಡಿರುವ ಬೋಧನಾ ಗುಣಮಟ್ಟ ಬುಡಕಟ್ಟು ಜನಾಂಗದ ಆಯೋಗದ ಬಗ್ಗೆ ನಡೆಸಿರುವ ಸಂಶೋಧನೆ ಮತ್ತು ಆರೋಗ್ಯದ ಅರಿವು ಮತ್ತು ಸೇವೆಯ ಅಂಶಗಳು ಜಾಗತಿಕ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಲು ಸಹಾಯಕವಾಗಿದೆ ಎಂದು ಹೇಳಿದರು.
ಶುದ್ಧ ಇಂಧನ ವಿಷಯದಲ್ಲಿ ಪರಿಹಾರಗಳನ್ನು ಉತ್ತೇಜಿಸುವಲ್ಲಿ ನಮ್ಮ ಅಕಾಡೆಮಿ ಮಾಡಿರುವ ಪ್ರಯತ್ನಗಳನ್ನು ಗುರುತಿಸಿ ನಮಗೆ ಪ್ರಪಂಚದಲ್ಲಿಯೇ 12ನೇ ಸ್ಥಾನ ಲಭಿಸಿದೆ, ಸಮಾನ ಮತ್ತು ಸಮೃದ್ಧಿ ಸಮಾಜ ರಚನಾತ್ಮಕ ಕಾರ್ಯಗಳನ್ನು ಗುರುತಿಸಿ ಜಾಗತಿಕ ಮಟ್ಟದಲ್ಲಿ 21ನೇ ಸ್ಥಾನ ಕೂಡಾ ನಮ್ಮ ಸಂಸ್ಥೆಗೆ ಲಭಿಸಿದೆ ಎಂದು ಮಂಜುನಾಥ್ ಹೇಳಿದರು.
ಪರಿಸರ ಸಂರಕ್ಷಣಾ ಜೀವ ವೈವಿಧ್ಯ ಸಂರಕ್ಷಣೆ ಮತ್ತು ಸುಸ್ಥಿರ ಬಹುನಿರ್ವಹಣೆ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಉಪಕ್ರಮಗಳು ಪ್ರಪಂಚದಲ್ಲಿ 49ನೇ ಸ್ಥಾನ ಗಿಟ್ಟಿಸಿ ಕೊಂಡಿದೆ ಎಂದು ತಿಳಿಸಿದರು.
ಇದಲ್ಲದೆ ಪ್ರಪಂಚದ ಜನತೆಗೆ ಶುದ್ಧ ನೀರು ಮತ್ತು ನೈರ್ಮಲ್ಯ ಖಾತ್ರಿಪಡಿಸುವ ಮೇಲೆ ಕೇಂದ್ರೀಕರಿಸುವ ಕೆಲಸಗಳನ್ನು ಗುರುತಿಸಿ ನಮಗೆ ವಿಶ್ವದಲ್ಲಿ 60ನೇ ಸ್ಥಾನ ಲಭಿಸಿದೆ, ಇದರೊಂದಿಗೆ ಜವಾಬ್ದಾರಿ ಯುತ ಉತ್ಪಾದನೆ ಮತ್ತು ಬಳಕೆ ಗುರಿಯಲ್ಲಿ 70ನೇ ಸ್ಥಾನ ಸಿಕ್ಕಿದೆ ಎಂದು ಇದೇ ವೇಳೆ ಅವರು ತಿಳಿಸಿದರು.
ಈ ಎಲ್ಲಾ ಗಮನಾರ್ಹ ಸಾಧನೆಗಳನ್ನು ಗುರುತಿಸಿ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಗೆ ಟೈಮ್ಸ್ ಹೈಯರ್ ಎಜುಕೇಶನ್ ಇನ್ ಫ್ಯಾಕ್ಟ್ ರ್‍ಯಾಂಕಿಂಗ್ 2024ರಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಬಹು ಮುಖ್ಯ ಗುರಿಯಾದ ಉತ್ತಮ ಆರೋಗ್ಯ ಮತ್ತು ಕ್ಷೇಮ ವಿಷಯದಲ್ಲಿ ಪ್ರಪಂಚದಲ್ಲಿ ಮೊದಲನೇ ಸ್ಥಾನ ಪಡೆದಿರುವ ಬಗ್ಗೆ ಜೆಎಸ್ಎಸ್ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಪತಿಗಳಾದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಎಲ್ಲರನ್ನು ಈ ವೇಳೆ ಅಭಿನಂದಿಸಿದರು.
ವರ್ಚುಯಲ್ ಮೂಲಕ ಮಾತನಾಡಿದ ಶ್ರೀ ಶಿವರಾತ್ರಿ ದೇಶಿಕಂದ್ರ ಸ್ವಾಮೀಜಿಯವರು ಎಲ್ಲಿ ಜ್ಞಾನವು ಭರವಸೆಯ ದಾರಿದೀಪವಾಗಿ ಕಾರ್ಯನಿರ್ವಹಿಸುವುದೊ ಅಲ್ಲಿ ಮಾನವೀಯತೆಯು ಸಮೃದ್ಧಿ ಮತ್ತು ಸಾಮರ್ಥ್ಯದ ಕಡೆಗೆ ಮಾರ್ಗದರ್ಶನ ಮಾಡಲು ಸಹಕಾರಿ ಎಂದು ತಿಳಿಸಿದರು.
ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ ಜಿ ಬೆಟ್ಸೂರ್ ಮಠ ಅವರು ಮಾತನಾಡಿ ನಮ್ಮ ವಿಶ್ವವಿದ್ಯಾನಿಲಯದ ಅತ್ಯುತ್ತಮ ಸಾಧನೆಗಳನ್ನು ಹಂಚಿಕೊಳ್ಳಲು ಸಂತೋಷ ಎಂದು ಹೇಳಿದರು.
ಆರೋಗ್ಯಕರ ಶಿಕ್ಷಣ ಮತ್ತು ಸಂಶೋಧನೆಯನ್ನು ವೃದ್ಧಿಸುವಲ್ಲಿನ ನಮ್ಮ ಪ್ರಯತ್ನಗಳು ನಿರಂತರ ಸಮರ್ಪಣಾ ಮನೋಭಾವ ಹೊಂದುವುದರ ಜೊತೆಗೆ ಯೋಗ ಕ್ಷೇಮವನ್ನು ಬೆಳೆಸುವ ಮತ್ತು ನವೀನ ಆರೋಗ್ಯ ಪರಿಹಾರಗಳನ್ನು ಉತ್ತೇಜಿಸುವಲ್ಲಿ ಭದ್ರತೆಯನ್ನು ಆಚರಿಸಲಾಗುತ್ತದೆ ಏಕೆಂದರೆ ನಾವು ಸಮಾಜ ಮತ್ತು ಪರಿಸರದ ಮೇಲೆ ಆಳವಾದ ಪ್ರಭಾವ ಬೀರುವ ಉಪಕ್ರಮಗಳನ್ನು ಮುನ್ನಡೆಸುವುದನ್ನು ಮುಂದುವರಿಸುವುದರ ಜೊತೆಗೆ ನಮ್ಮ ಬದ್ಧತೆಯನ್ನು ಕಾಪಾಡಿಕೊಂಡು ಬರುತ್ತೇವೆ ಎಂದು ಹೇಳಿದರು.