ಪೋಕ್ಸೋ ಪ್ರಕರಣ: ಬಿಎಸ್‌ವೈ ವಿರುದ್ಧ ಅರೆಸ್ಟ್‌ ವಾರಂಟ್‌

ಬೆಂಗಳೂರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ದಾಖಲಾಗಿದ್ದ ಪೋಕ್ಸೋ ಕೇಸ್‌ನಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ

ಪೋಕ್ಸೋ ಪ್ರಕರಣ ಕೈಗೆತ್ತಿಕೊಂಡಿದ್ದ ಸಿಐಡಿ ಬಂಧನ ವಾರಂಟ್ ಕೋರಿ ಹೈಕೋರ್ಟ್‌ಗೆ  ಇಂದು ಅರ್ಜಿ ಸಲ್ಲಿಸಿತ್ತು. ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ ಜಾಮೀನು ರಹಿತ ವಾರಂಟ್‌ ಜಾರಿಗೆ ಆದೇಶಿಸಿತು.

ಸಿಐಡಿ ಪರ ವಾದ ಮಂಡಿಸಿದ್ದ ಎಸ್‌ಪಿಪಿ ಅಶೋಕ್ ನಾಯಕ್, ನ್ಯಾಯಾಧೀಶರ ಮುಂದೆ ದೂರಿನ ಸಾರಾಂಶವನ್ನು ಓದಿದರು.

ಯಡಿಯೂರಪ್ಪ ಅವರು ದೆಹಲಿಯಲ್ಲಿ ಇರುವುದಾಗಿ ಹೇಳಿದ್ದು, ಜೂನ್‌ 17 ರಂದು ವಿಚಾರಣೆ ಬರುವುದಾಗಿ ಹೇಳಿರುವುದು ಪ್ರಾಮಾಣಿಕ ಹೇಳಿಕೆ ಅಲ್ಲ, ಅವರ ಲೋಕೇಷನ್ ಪತ್ತೆ ಆಗುತ್ತಿಲ್ಲ, ಇಂತಹ ಸಂದರ್ಭದಲ್ಲಿ ತನಿಖಾಧಿಕಾರಿಯಾಗಿ ಅರೆಸ್ಟ್ ಮಾಡುವ ಕ್ರಮ ಮಾಡಲೇಬೇಕಾಗಿದೆ ಎಂದು ಹೇಳಿದ್ದಾರೆ.

ವಿಕ್ಟೀಮ್ಸ್ ಅನ್ನು ಖರೀದಿ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಆರೋಪಿ ಬಾರಿ ಪ್ರಭಾವಿಯಾಗಿದ್ದಾರೆ. ಎರಡು ಬಾರಿ ಸಿಎಂ ಆಗಿದ್ದವರು, ಅವರ ಮಗ ಪಕ್ಷವೊಂದರ ರಾಜ್ಯಾಧ್ಯಕ್ಷರು, ಶಾಸಕರೂ ಆಗಿದ್ದಾರೆ. ಇನ್ನೊಬ್ಬ ಮಗ ಎಂಪಿ.

ಇಷ್ಟೆಲ್ಲಾ ಪ್ರಭಾವ ಇರುವ ವ್ಯಕ್ತಿಯನ್ನು ಪತ್ತೆ ಹಚ್ಚುವುದು ಕಷ್ಟ. ಈಗಾಗಲೇ ಅವರ ಲೊಕೇಷನ್ ಪತ್ತೆಯಾಗುತ್ತಿಲ್ಲ ಎಂದು ವಾದ ಮಂಡಿಸಿದರು.

ಇಷ್ಟೆಲ್ಲ ಆಧಾರ ಇದ್ದರೂ ಯಾಕೆ ಅವರನ್ನ ಕೂಡಲೇ ಬಂಧನ ಮಾಡಿಲ್ಲ ಎಂದು ನ್ಯಾಯಾಧೀಶರು ಎಸ್‌ಪಿಪಿ ಅವರಿಗೆ ಪ್ರಶ್ನೆ ಮಾಡಿದರು.

ಸಾಕ್ಷ್ಯಗಳನ್ನು ಸಂಗ್ರಹ ಮಾಡಲಾಗುತ್ತಿತ್ತು ಎಂದು ಎಸ್‌ಪಿಪಿ ಉತ್ತರಿಸಿದರು.

ಇದೀಗ ಸಾಕ್ಷ್ಯ ನಾಶ ಮತ್ತು ಹಣದ ಆಮಿಷದ ಸಾಕ್ಷ್ಯಗಳನ್ನು ಸಮಗ್ರವಾಗಿ ಸಂಗ್ರಹಿಸಲಾಗಿದೆ. ಹಾಗಾಗಿ ಅರೆಸ್ಟ್ ವಾರೆಂಟ್ ಕೊಡಬೇಕು ಎಂದು ಮನವಿ ಮಾಡಿದರು.

ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೆ ಆದೇಶಿಸಿತು.