ಭಾರತದ ಎಲ್ಲಾ ಜಿಲ್ಲೆಗಳಲ್ಲಿ ಐಸಿಸ್ ಜಾಲ ರೂಪಿಸಲು ಉಗ್ರರ ಸಂಚು

ಬೆಂಗಳೂರು: ಬಳ್ಳಾರಿಯಲ್ಲಿ ಕುಳಿತು ದೇಶದ ಪ್ರತಿ ಜಿಲ್ಲೆಗಳಲ್ಲೂ ಐಸಿಸ್‌ ಉಗ್ರರ ಜಾಲ ರೂಪಿಸಬೇಕೆಂದು ಸಂಚು ರೂಪಿಸಿದ್ದ 7 ಶಂಕಿತ ಉಗ್ರರ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ.

ಎನ್‌ಐಎ ಅಧಿಕಾರಿಗಳು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಸ್ಫೋಟಕ ರಹಸ್ಯಗಳನ್ನು ಉಲ್ಲೇಖಿಸಿದ್ದು,ರಾಜ್ಯ ಹಾಗೂ ದೇಶದ ಜನ ಬೆಚ್ಚಿಬೀಳುವಂತಿದೆ.

ಕರ್ನಾಟಕದಲ್ಲಿ ಬಂಧನಕ್ಕೊಳಗಾಗಿದ್ದ ಮೊಹಮ್ಮದ್‌ ಮುನಿರುದ್ದೀನ್‌, ಸೈಯದ್‌ ಅಮೀರ್‌, ಎಂ.ಡಿ.ಮುಜಮಿಲ್‌ ಹಾಗೂ ಮಹಾರಾಷ್ಟ್ರದ ನಾಲ್ವರು ಉಗ್ರರ ವಿರುದ್ಧ ನ್ಯಾಯಾಲಯಕ್ಕೆ ಎನ್‌ಐಎ ಚಾರ್ಜ್‌ಶೀಟ್‌  ಸಲ್ಲಿಸಿದೆ.

ಉಗ್ರರ ಈ ಜಾಲ ದೇಶದ ಪ್ರತಿ ಜಿಲ್ಲೆಯಲ್ಲೂ ಯುವಕರನ್ನು ಐಸಿಎಸ್‌ ಉಗ್ರ ಸಂಘಟನೆಗೆ ನೇಮಿಸುವ ಉದ್ದೇಶ ಹೊಂದಿತ್ತು. ಪ್ರತಿ ಜಿಲ್ಲೆಯಲ್ಲೂ ಕನಿಷ್ಠ 50 ಯುವಕರನ್ನು ಸ್ಲೀಪರ್‌ಸೆಲ್‌ಗಳನ್ನಾಗಿ ನೇಮಕ ಮಾಡಿಕೊಂಡು, 2025ರ ವೇಳೆಗೆ ದೇಶಾದ್ಯಂತ ಐಸಿಸ್‌ ಉಗ್ರ ಸಂಘಟನೆಯ ಜಾಲವನ್ನು ವಿಸ್ತರಣೆ ಮಾಡಬೇಕೆಂಬ ಉದ್ದೇಶ ಹೊಂದಿತ್ತು.

ಅದಕ್ಕಾಗಿಯೇ ಬಳ್ಳಾರಿಯ ಮೂವರು ಹಾಗೂ ಮಹಾರಾಷ್ಟ್ರದ ನಾಲ್ವರು ಶಂಕಿತರು ಭಾರೀ ಸಂಚು ರೂಪಿಸಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಜತೆಗೆ ಈ ಚಾರ್ಜ್‌ಶೀಟ್‌ ಅನ್ನು ಎನ್‌ಐಎ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಐಸಿಸ್‌ ಉಗ್ರ ಸಂಘಟನೆಯ ಸುಲೇಮಾನ್‌ ಅಲಿಯಾಸ್‌ ಮಿನಾಜ್‌ ಎಂಬಾತನಿಂದ 7 ಉಗ್ರರು ಭಾರತದಾದ್ಯಂತ ಐಸಿಸ್‌ ಜಾಲವನ್ನು ವಿಸ್ತರಿಸುವುದಾಗಿ ಪ್ರತಿಜ್ಞೆ ಪಡೆದಿದ್ದರು.

ಐಸಿಸ್‌ ಉಗ್ರ ಸಂಘಟನೆಯ ಜೊತೆ ನಿರಂತರವಾಗಿ ಇವರು ಸಂಪರ್ಕದಲ್ಲಿದ್ದರು. ಜಿಲ್ಲೆಗಳಲ್ಲಿ ಸ್ಲೀಪರ್ ಸೆಲ್‌ಗಳನ್ನು ಬಳಸಿ ಗೆರಿಲ್ಲಾ ಮಾದರಿಯ ದಾಳಿಗೆ ಷಡ್ಯಂತ್ರ ರೂಪಿಸಿದ್ದರು.

ಅಷ್ಟೇ ಅಲ್ಲ ಸುಧಾರಿತ ಸ್ಫೋಟಕ ಸಾಧನಗಳ  ಮೂಲಕ ದಾಳಿ ನಡೆಸುವುದು, ಬಳ್ಳಾರಿಯನ್ನು ಉಗ್ರ ಸಂಘಟನೆಯ ಜಾಲದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವುದು, ಇಲ್ಲಿಯೇ ಪ್ರಾಯೋಗಿಕವಾಗಿ ಸ್ಫೋಟಿಸುವುದು ಸೇರಿ ಹಲವು ಕುತಂತ್ರಗಳನ್ನು ಹೆಣೆದಿದ್ದರು.

2025ರ ವೇಳೆಗೆ ಪ್ರತಿಯೊಂದು ಜಿಲ್ಲೆಯಲ್ಲಿ ಸ್ಲೀಪರ್‌ಸೆಲ್‌ಗಳನ್ನು ನೇಮಿಸಿ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರುವ ಉದ್ದೇಶ ಹೊಂದಿದ್ದರು ಎಂದು ಎನ್‌ಐಎ ಅಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಶಂಕಿತ ಉಗ್ರರ ಬಳಿ ಇದ್ದ ಹಲವು ಡಿವೈಸ್‌ಗಳು, ಜಿಹಾದ್‌ ಕುರಿತ ಪುಸ್ತಕಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಹೇಳಿದೆ.