ದರ್ಶನ್ ಪ್ರಕರಣ ನಾಗರೀಕ ಸಮಾಜ ತಲೆ ತಗ್ಗಿಸುವಂತದ್ದು:ಸಿ.ಟಿ.ರವಿ

ಚಿಕ್ಕಮಗಳೂರು: ನಟ ದರ್ಶನ್ ಪ್ರಕರಣದ ಸುದ್ದಿ ನಾಗರೀಕ ಸಮಾಜ ತಲೆ ತಗ್ಗಿಸುವಂತದ್ದು ಎಂದು ‌ಬಿಜೆಪಿ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.

ರಾಜಕಾರಣಿಗಳ ಮೇಲಿನ ಟೀಕೆಗೆ ಅದನ್ನೇ ಮಾಡೋ ಹಾಗಿದ್ರೆ ಗಂಟೆಗೊಂದು ಹೆಣ ಬೀಳುತ್ತಿತ್ತು ಎಂದು ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಷ್ಟು ಕ್ರೂರ ಮನಸ್ಥಿತಿ ಇರುತ್ತೆ ಅಂತ ಯಾರೂ ಭಾವಿಸಿರಲಿಲ್ಲ. ಸಿನಿಮಾದಲ್ಲಿ ಹೀರೋಗಳಾದವರು ನಿಜ ಜೀವನದಲ್ಲಿ ಹೀರೋಗಳಾಗಿರಲ್ಲ.

ದರ್ಶನ್‌ ಪ್ರಕರಣ ನೋಡಿದಾಗ ಅವರು ಸಿನಿಮಾದಲ್ಲಿ ಮಾತ್ರ ಹೀರೋ ಆಗಿದ್ದರು ಅನ್ನಿಸುತ್ತದೆ, ನಮ್ಮ ಪಕ್ಷ ರೇಣುಕಾಸ್ವಾಮಿ ಕುಟುಂಬದ ಜೊತೆ ಇದೆ, ಆ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.

ಯಾರಿಗೂ ಕಾನೂನು ಕೈಗೆತ್ತಿಕೊಂಡು ಕ್ರೌರ್ಯ ಮಾಡುವ ಅಧಿಕಾರವಿಲ್ಲ, ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಹೆಚ್ಚು ಬದ್ಧತೆ ಇರಬೇಕು ಎಂದು ಸಿ.ಟಿ.ರವಿ ಹೇಳಿದರು.

ದರ್ಶನ್ ಮತ್ತಿತರರಿಗೆ ರಾಜಮರ್ಯಾದೆ, ವಿಶೇಷ ಸವಲತ್ತು ಕೊಡುತ್ತಿರುವುದು ನಿಜವೇ ಆದರೆ ಅದು ಒಳ್ಳೆಯದಲ್ಲ, ಬಲ ಇದ್ದವನಿಗೆ ಒಂದು ಬಡವನಿಗೊಂದು ರೀತಿ ಎಂಬ ಸಂದೇಶ ಹೋಗುತ್ತದೆ ಖಂಡಿತಾ ಹಾಗೆ ಆಗಬಾರದು ಎಂದು ತಿಳಿಸಿದರು.