ಹಾಸನ: ನಗರದ ಹೊಯ್ಸಳ ಬಡಾವಣೆಯಲ್ಲಿ ಇಬ್ಬರು ಗನ್ ಶೂಟ್ ಗೆ ಬಲಿಯಾಗಿದ್ದು ಹಾಸನದ ಜನತೆ ಬೆಚ್ವಿಬಿದ್ದಿದ್ದಾರೆ.
ಬೆಂಗಳೂರು ಮೂಲದ ಆಸಿಫ್ (46) ಮತ್ತು ಹಾಸನದ ಆಡುವಳ್ಳಿಯ ಶರಾಫತ್ ಅಲಿ( 52) ಗನ್ ಶೂಟ್ ಗೆ ಬಲಿಯಾದ ವ್ಯಕ್ತಿಗಳು.
ಇವರಿಬ್ಬರು ಸ್ನೇಹಿತರಾಗಿದ್ದು ಶುಂಠಿ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು ಎಂದು ಗೊತ್ತಾಗಿದೆ.
ಗುರುವಾರ ಮಧ್ಯಾಹ್ನ 12.30 ರ ಸಮಯದಲ್ಲಿ ನಿಸ್ಸಾನ್ ಕಾರಿನಲ್ಲಿ ಆಸಿಫ್ ಮತ್ತು ಶರಾಫತ್ ಆಲಿ ಹೊಯ್ಸಳ ನಗರಕ್ಕೆ ಬಂದಿದ್ದರು.
ಈ ವೇಳೆ ಪಕ್ಕದಲ್ಲಿದ್ದ ನಿವೇಶನವನ್ನು ನೋಡಿ ನಂತರ ಕಾರಿನ ಒಳಗೆ ಕುಳಿತು ಮಾತನಾಡುತ್ತಿದ್ದರು.ಅದೇನಾಯಿತೊ ಇದ್ದಕ್ಕಿದ್ದಂತೆ ಆಸಿಫ್ ಅವರು ಶರಫತ್ ಆಲಿ ಅವರಿಗೆ ಗುಂಡು ಹಾರಿಸಿದ್ದಾರೆ.
ನಂತರ ಆಸಿಫ್ ಕೂಡಾ ತಲೆಗೆ ಗುಂಡುಹಾರಿಸಿಕೊಂಡಿದ್ದಾರೆ,ಇಬ್ಬರೂ ಕಾರಿನಲ್ಲಿಯೇ ಮೃತಪಟ್ಟಿದ್ದು ಈ ಕೃತ್ಯಕ್ಕೆ ಬಳಸಿದ ಗನ್ ಕಾರಿನೊಳಗೆ ಇತ್ತೆಂದು ಪೊಲೀಸರು ತಿಳಿಸಿದ್ದಾರೆ.
ಗನ್ ಶೂಟ್ ಶಬ್ದ ಬಂದಾಗ ಸುತ್ತಮುತ್ತಲಿನ ಜನ ಪಟಾಕಿ ಸದ್ದು ಎಂದು ತಿಳಿದಿದ್ದರು. ನಂತರ ಕಾರಿನಿಂದ ಆಚೆ ಶರಫತ್ ಅಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಂತರ ಸ್ಥಳಕ್ಕೆ ಕೆ ಆರ್ ಪುರಂ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಎಸ್ಪಿ ಮೊಹಮ್ಮದ್ ಸುಜಿತಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಹಾಗೂ ಬೆರಳಚ್ಚು ತಜ್ಞರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು
ಮೃತ ಶರಫತ್ ಅವರು ಹತ್ತು ವರ್ಷಗಳಿಂದ ಹಾಸನದಲ್ಲಿಯೇ ವಾಸವಾಗಿದ್ದರೆಂದು ತಿಳಿದು ಬಂದಿದೆ
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ ಪಿ ಮೊಹಮ್ಮದ್ ಸುಜಿತಾ ಅವರು ನಿವೇಶನ ನೋಡಲು ಆಗಮಿಸಿದ ಇಬ್ಬರು ಕಾರಿನೊಳಗೆ ಕೂತಿರುವ ವೇಳೆ ಗನ್ ಶೂಟ್ ನಡೆದಿದೆ. ಯಾವ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಕೃತ್ಯದ ವೇಳೆ ಬಳಸಿರುವ ಕಾರು ಮೈಸೂರು ಜಿಲ್ಲೆಯ ರಿಜಿಸ್ಟರ್ ನಂಬರ್ ಆಗಿದ್ದು ಇಲ್ಲಿಗೆ ಏಕೆ ತರಲಾಗಿದೆ ಹಾಗೂ ಯಾವ ಕಾರಣಕ್ಕೆ ಕೃತ್ಯ ನಡೆದಿದೆ ಎಂಬ ಬಗ್ಗೆ ಎಲ್ಲಾ ಆಯಮದಲ್ಲಿಯೂ ತನಿಖೆ ಮುಂದುವರೆದಿದೆ ಎಂದು ಹೇಳಿದರು.
ಪ್ರಕರಣ ನಡೆಯುವ ಸಂದರ್ಭದಲ್ಲಿ ಹಾಗೂ ಕಾರು ಇಲ್ಲಿಗೆ ಬಂದ ವೇಳೆ ಮತ್ತೆ ಯಾರಾದರೂ ಬಂದಿದ್ದರಾ, ಬೇರೆ ವಾಹನ ಸಾಗಿದೆಯೇ ಎಂಬುದರ ಕುರಿತು ಸುತ್ತಮುತ್ತಲಿನ ಮನೆಯ ಸಿಸಿಟಿವಿ ಕ್ಯಾಮೆರಾ ಗಳನ್ನು ಪರಿಶೀಲನೆ ನಡೆಸಲಾಗುವುದು, ಕೃತ್ಯಕ್ಕೆ ಬಳಸಿದ ಗನ್ ಕಾರಿನೊಳಗೆ ದೊರೆತಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಳಿಕ ಗನ್ನಿನ ಮಾದರಿ ಹಾಗೂ ಇತರೆ ಮಾಹಿತಿ ದೊರೆಯಲಿದೆ ಎಂದು ಎಸ್ ಪಿ ಮಾಹಿತಿ ನೀಡಿದರು.
ಒಬ್ಬ ವ್ಯಕ್ತಿಗೆ ತಲೆಗೆ ಗುಂಡು ತಗುಲಿದೆ, ಮತ್ತೊಬ್ಬರಿಗೆ ಗುಂಡು ಎಲ್ಲೆಲ್ಲಿ ತಗುಲಿ ಸಾವಾಗಿದೆ ಎಂಬುದು ವಿಧಿವಿಜ್ಙಾನ ಪರೀಕ್ಷೆಯ ನಂತರವಷ್ಠೆ ತಿಳಿಯಲಿದೆ ಎಂದು ವಿವರಿಸಿದರು.
ರಿಯಲ್ ಎಸ್ಟೇಟ್ ಹಾಗೂ ಹಣಕಾಸಿನ ವ್ಯವಹಾರ ಸಂಬಂಧ ಇಬ್ಬರಲ್ಲೂ ಮನಸ್ತಾಪ ಉಂಟಾಗಿ ಪ್ರಕರಣ ನಡೆದಿದೆ ಎಂದು ಪ್ರಾಥಮಿಕ ಹಂತದ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಎಸ್ಪಿ ಮೊಹಮ್ಮದ್ ಸುಜಿತಾ ತಿಳಿಸಿದ್ದಾರೆ.
ನಗರದ ಹೃದಯ ಭಾಗದಲ್ಲಿ ಅಪೂರ್ವ ಹೋಟೆಲ್ ಬಳಿ ದಶಕಗಳ ಹಿಂದೆ ಅಪ್ಸರ್ ಎಂಬ ವ್ಯಕ್ತಿಯ ಮೇಲೆ ಶೂಟ್ ಔಟ್ ನಡೆದಿತ್ತು, ಇಂದು ಗನ್ ಶೂಟ್ ಪ್ರಕರಣ ನಡೆದಿದ್ದು ನಗರದ ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ.