ಪ್ರಮಾಣವಚನ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯರು: ಸಿದ್ದು ಕಾಲಿಗೆ ನಮಸ್ಕರಿಸಿದ ಸಿ.ಟಿ ರವಿ

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನೂತನವಾಗಿ ಆಯ್ಕೆಯಾದ 17 ಮಂದಿ ವಿಧಾನ ಪರಿಷತ್ ಸದಸ್ಯರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದಿಂದ ಆಯ್ಕೆಯಾದ 17 ಜನ ಪರಿಷತ್ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.

ಇದಕ್ಕೂ ಮುನ್ನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು, ನೂತನ ಪರಿಷತ್ ಸದಸ್ಯರ ಬಳಿ ಬಂದು ಕುಶಲೋಪರಿ ವಿಚಾರಿಸಿದರು.

ನಂತರ ನಡೆದ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು ಸಚಿವ ಹೆಚ್.ಕೆ ಪಾಟೀಲ್ ವೇದಿಕೆಯಲ್ಲಿದ್ದರು.

ಬೋಸರಾಜು, ಗೋವಿಂದರಾಜ್ (ಕಾಂಗ್ರೆಸ್), ಐವಾನ್ ಡಿಸೋಜ (ಕಾಂಗ್ರೆಸ್), ಜವರಾಯಿಗೌಡ (ಜೆಡಿಎಸ್), ಎಂ.ಜಿ. ಮೂಳೆ (ಬಿಜೆಪಿ), ಯತೀಂದ್ರ ಸಿದ್ದರಾಮಯ್ಯ (ಕಾಂಗ್ರೆಸ್), ಸಿ.ಟಿ ರವಿ (ಬಿಜೆಪಿ), ರವಿಕುಮಾರ್ (ಬಿಜೆಪಿ), ವಸಂತ್ ಕುಮಾರ್ (ಕಾಂಗ್ರೆಸ್), ಡಾ.ಚಂದ್ರಶೇಖರ ಪಾಟೀಲ್ (ಕಾಂಗ್ರೆಸ್ ಪದವೀಧರ ಕ್ಷೇತ್ರ) ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಜಯದೇವ್ ಗುತ್ತೇದಾರ್ (ಕಾಂಗ್ರೆಸ್) ಬುದ್ದ, ಬಸವ, ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರೆ, ಬಲ್ಕಿಸ್ ಬಾನು (ಕಾಂಗ್ರೆಸ್) ಅಲ್ಲಾ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಸಿಎಂ ಕಾಲಿಗೆ ಬಿದ್ದ ಸಿ.ಟಿ ರವಿ:

ಪರಿಷತ್ ನೂತನ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿ.ಟಿ ರವಿ ಬಳಿಕ ಸಿಎಂ ಕಾಲಿಗೆ ನಮಸ್ಕರಿಸಿದ್ದು ವಿಶೇಷವಾಗಿತ್ತು.

ಆಗ‌ ನಗುಮೊಗದಿಂದಲೇ ಸಿ.ಟಿ ರವಿ ಅವರ ಬೆನ್ನು ತಟ್ಟಿ, ಕಿವಿ ಹಿಂಡಿ ಸಿಎಂ ಬೀಳ್ಕೊಟ್ಟರು.