ಕಾಲೇಜಿನಲ್ಲಿ ಹಿಜಾಬ್ ನಿಷೇಧ ಎತ್ತಿಹಿಡಿದ ಬಾಂಬೆ ಹೈಕೋರ್ಟ್

ಮುಂಬೈ: ಕ್ಯಾಂಪಸ್‌ನಲ್ಲಿ ಬುರ್ಖಾ, ಹಿಜಾಬ್ ಅಥವಾ ನಿಖಾಬ್ ಧರಿಸುವುದಕ್ಕೆ ಚೆಂಬೂರ್ ಕಾಲೇಜು ವಿಧಿಸಿದ್ದ ನಿಷೇಧವನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದೆ.

ನ್ಯಾಯಮೂರ್ತಿಗಳಾದ ಎ ಎಸ್ ಚಂದೂರ್ಕರ್ ಮತ್ತು ರಾಜೇಶ್ ಪಾಟೀಲ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಪ್ರಕರಣದ ವಿಚಾರಣೆ ನಡೆಸಿತು.

ವಸ್ತ್ರ ಸಂಹಿತೆ ಹೇರುವುದರ ಹಿಂದೆ ಕಾಲೇಜು ಆಡಳಿತ ಮಂಡಳಿ ಸ್ಪಷ್ಟ ಉದ್ದೇಶ ಹೊಂದಿದೆ. ಯಾವುದೇ ವಿದ್ಯಾರ್ಥಿಯ ಧರ್ಮ ಬಯಲಾಗಬಾರದು ಎಂಬ ಉದ್ದೇಶ ವಿದ್ಯಾರ್ಥಿಗಳ ಹಿತಾಸಕ್ತಿಯಿಂದ ಕೂಡಿದೆ ಎಂದು ಕೋರ್ಟ್ ಹೇಳಿದೆ.

ಎನ್ ಜಿ ಆಚಾರ್ಯ ಮತ್ತು ಡಿ.ಕೆ ಮರಾಠೆ ಕಾಲೇಜಿನ ಒಂಬತ್ತು ವಿದ್ಯಾರ್ಥಿಗಳು ಹಿಜಾಬ್ ನಿಷೇಧದ ವಿರುದ್ಧ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇದರಲ್ಲಿ ಹಿಜಾಬ್ ಅನ್ನು ಹೇರುವುದು ನಿರಂಕುಶ, ತಾರತಮ್ಯ ಮತ್ತು ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು ಮತ್ತು ಧರ್ಮದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದರು.

ಈ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಜತೆಗೆ ಇಸ್ಲಾಂನಲ್ಲಿ ನಂಬಿಕೆಯಿರುವ ವಿದ್ಯಾರ್ಥಿನಿಯರು ಹಿಜಾಬ್ ಅಥವಾ ನಿಖಾಬ್ ಧರಿಸುವುದು ಅನಿವಾರ್ಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದೆ.