ಹಾವೇರಿ: ಹಾವೇರಿ ಜಿಲ್ಲೆಯಲ್ಲಿಂದು ಬ್ಯಾಡ್ ಪ್ರೈಡೆ. ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು 13 ಮಂದಿ ದುರ್ಮರಣ ಅಪ್ಪಿದ್ದಾರೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.
ನಿಂತಿದ್ದ ಟ್ರಕ್ ಗೆ ಹಿಂದಿನಿಂದ ಟಿಟಿ ವಾಹನ ಬಂದು ಡಿಕ್ಕಿ ಹೊಡೆದಿದೆ.
ಪರಶುರಾಮ್(45), ಭಾಗ್ಯ(40), ನಾಗೇಶ(50), ವಿಶಾಲಾಕ್ಷಿ(40), ಅರ್ಪಿತಾ(18), ಸುಭದ್ರಾ ಬಾಯಿ(65), ಪುಣ್ಯ(50), ಮಂಜುಳಾಬಾಯಿ, ಚಾಲಕ ಆದರ್ಶ್(23), ಮಾನಸ(24), ರೂಪಾ(40), ಮಂಜುಳಾ(50) ಎಂದು ಗುರುತಿಸಲಾಗಿದೆ.
ಟೆಂಪೋ ಟ್ರಾವೆಲರ್ ಚಾಲಕ ಅಪಘಾತವಾದಕೂಡಲೇ ಪರಾರಿಯಾಗಿದ್ದಾನೆ.
ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಎಹಟ್ಟಿ ಗ್ರಾಮದ ನಿವಾಸಿಗಳಾಗಿದ್ದಾರೆ. ಘಟನೆಯಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಟಿ ವಾಹನದಲ್ಲಿದ್ದ ಒಟ್ಟು 15 ಜನರು ಸವದತ್ತಿ ರೇಣುಕಾ ಯಲ್ಲಮ್ಮ ದರ್ಶನ ಪಡೆದು ಊರಿಗೆ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಲಾರಿ ಚಾಲಕನ ತಪ್ಪು ಪಾರ್ಕಿಂಗ್ ನಿಂದಾಗಿ ಅಪಘಾತ ಸಂಭವಿಸಿದೆ ಎಂದು ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳೀಯರು ಅಪಘಾತ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದರು, ಪೊಲೀಸರು ಅಪಘಾತಕ್ಕೀಡಾದ ವಾಹನಗಳನ್ನು ಹೊರತೆಗೆದು ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಬ್ಯಾಡಗಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.