ಮುಡಾ ಹಗರಣ ತಪ್ಪಿತಸ್ಥರಿಗೆ ಶಿಕ್ಷೆ ಆಗದಿದ್ದರೆ ಹೋರಾಟ: ಸಿ.ಟಿ.ರವಿ

ಮೈಸೂರು: ಮುಡಾ ಕಚೇರಿಯಲ್ಲಿ ನಡೆದಿರುವ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದ್ದಾರೆ.

ಮೈಸೂರಿನ ಬಿಜೆಪಿ ಕಚೇರಿಗೆ ಆಗಮಿಸಿದ ವೇಳೆ, ಮುಡಾ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಸಿಎಂ ಸಿದ್ದರಾಮಯ್ಯನವರ ಮೂಗಿನ‌ಡಿ ಎರಡೂವರೆ ಸಾವಿರ ಕೋಟಿ ಸರ್ಕಾರಿ ಆಸ್ತಿ ದುರುಪಯೋಗವಾಗಿದೆ ಎಂಬ ವಿಚಾರ ಕೇಳಿ ದಿಗ್ಬ್ರಮೆಯಾಯಿತು ಎಂದು ಅಚ್ಚರಿ ‌ವ್ಯಕ್ತಪಡಿಸಿದರು.

ಬಡವರಿಗೆ, ದಲಿತರಿಗೆ ಕೊಡಲು ಇವರ ಬಳಿ ನಿವೇಶನಗಳಿಲ್ಲ. ಕಳ್ಳ-ಕಾಕರಿಗೆ ಬೇನಾಮಿಯಾಗಿ ಕೊಡಲು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು, ತಪ್ಪಿತಸ್ಥರ ತಲೆದಂಡವಾಗಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸುತ್ತೇವೆ ಎಂದು ಸಿ.ಟಿ.ರವಿ ಎಚ್ಚರಿಸಿದರು.

ಇದರಲ್ಲಿ ದೊಡ್ಡವರ ಕೃಪಾಕಟಾಕ್ಷ ಇದೆ ಹಾಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಅವರು ‌ಆಗ್ರಹಿಸಿದರು.

ಚಂದ್ರಶೇಖರನಾಥ ಸ್ವಾಮೀಜಿ ಬಗ್ಗೆ ಸಚಿವ ರಾಜಣ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ನಾನು ಆ ವಿವಾದದ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ, ಆದರೆ ಇದು ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ರವಿ ಹೇಳಿದರು.

ರಾಜ್ಯದಲ್ಲಿ ಬೆಲೆ ಏರಿಕೆ, ಹಣದುಬ್ಬರದಿಂದ ಜನ ತತ್ತರಿಸಿದ್ದಾರೆ. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರು ಈ ಬಗ್ಗೆ ಹೇಳಬೇಕು ಎಕನಾಮಿಕ್ಸ್ ಎನ್ನುವುದನ್ನು ಸಿದ್ರಾಮಿಕ್ಸ್ ಅಂತ ಮಾಡಬೇಕು ಎಂದು ವ್ಯಂಗ್ಯ ವಾಡಿದರು.