ಸರ್ಕಾರಿ ಕಾರ್ಯಕ್ರಮದಲ್ಲಿ ಸ್ವಾಮೀಜಿ ರಾಜಕೀಯ ಮಾತನಾಡಬಾರದಿತ್ತು: ಕೃಷ್ಣಬೈರೇಗೌಡ

ಮೈಸೂರು: ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಸ್ವಾಮೀಜಿಗಳು ರಾಜಕೀಯ ವಿಷಯ ಪ್ರಸ್ತಾಪಿಸಬಾರದಿತ್ತು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಮೈಸೂರಿಗೆ ಭೇಟಿ ನೀಡಿದ್ದ ವೇಳೆ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಚಿವರು ಮಾತನಾಡಿದರು.

ನಾಡಪ್ರಭು ಕೆಂಪೇಗೌಡ ಜಯಂತಿ ಸಂದರ್ಭದಲ್ಲಿ ವೇದಿಕೆಯಲ್ಲೇ ಸ್ವಾಮೀಜಿಗಳು ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕೆಂದು ಸಿದ್ದರಾಮಯ್ಯ ಅವರಿಗೆ ನೇರವಾಗಿ ಮನವಿ ಮಾಡಿದ್ದರು.

ಈ‌‌ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಸಚಿವರು, ಸ್ವಾಮೀಜಿಯವರು ಯಾವ ಕಾರ್ಯಕ್ರಮಕ್ಕೆ ಆಗಮಿಸಿದ್ದರೋ ಅದರ ಬಗ್ಗೆ ಮಾತನಾಡಬಹುದಾಗಿತ್ತು ಆದರೆ ಅವರು ರಾಜಕೀಯ ವಿಷಯ ಪ್ರಸ್ತಾಪಿಸಿದರು, ಅದೂ ವೇದಿಕೆಯಲ್ಲೇ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಹೇಳಿದ್ದು ನಿಜಕ್ಕೂ ಸರಿಯಲ್ಲ ಎಂದು ತಿಳಿಸಿದರು.

ಒಂದು ವೇಳೆ ಅವರಿಗೆ ಈ ಬಗ್ಗೆ ಮಾತನಾಡಬೇಕಿದ್ದರೆ ಮುಖ್ಯಮಂತ್ರಿಗಳನ್ನು ನೇರವಾಗಿ ಭೇಟಿ ಮಾಡಿ ಮಾತನಾಡಬಹುದಿತ್ತು. ಇಲ್ಲವೇ ತಮ್ಮ ಮಠಕ್ಕೆ ಮುಖ್ಯಮಂತ್ರಿಗಳನ್ನು ಕರೆಸಿಕೊಂಡು ಮಾತನಾಡಬಹುದಿತ್ತು ಅದು ಬಿಟ್ಟು ಕಾರ್ಯಕ್ರಮದಲ್ಲಿ ಮಾತನಾಡಬಾರದಾಗಿತ್ತು ಎಂದು ಮುಗುಮ್ಮಾಗಿ ಹೇಳಿದರು.

ಹೆಚ್ಚುವರಿ ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಬಹಳ ಚರ್ಚೆ ಆಗುತಿದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಅದನ್ನು ನಮ್ಮ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಪ್ರವಾಹದಿಂದ ಉಂಟಾಗುವ ಬೆಳೆ ಪರಿಹಾರಕ್ಕಾಗಿ 700 ಕೋಟಿ ರೂ ಮೀಸಲಿಟ್ಟಿದ್ದೇವೆ, ಸದ್ಯದ ಪರಿಸ್ಥಿತಿಯಲ್ಲಿ ನಾವು ಕೇಂದ್ರಕ್ಕೆ ಬೆಳೆ ಹಾನಿ ಮುಂತಾದ ಪ್ರಾಕೃತಿಕ ವಿಕೋಪ ಪರಿಹಾರಕ್ಕೆ ಮನವಿ ಸಲ್ಲಿಸುವ ಪರಿಸ್ಥಿತಿ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.