ಬೆಂಗಳೂರು: ಕೃತಘ್ನಗೇಡಿತನದ ಸಿದ್ದರಾಮಯ್ಯರಿಂದ ನಮ್ಮ ಪಕ್ಷ ಸ್ವಾಭಿಮಾನದ ಪಾಠ ಕಲಿಯಬೇಕಿಲ್ಲ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಸಿದ್ದರಾಮಯ್ಯನವರ ವಿರುದ್ಧ ಕುಮಾರಸ್ವಾಮಿ ಭಾನುವಾರ ಟ್ವೀಟ್ ಮಾಡಿದ್ದಾರೆ.
ಜೆಡಿಎಸ್ ಅವಕಾಶವಾದಿ ಪಕ್ಷ ಎಂದು ಹೇಳಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ಹೆಚ್.ಡಿ.ಕೆ ಸಾಲು ಸಾಲು ಟ್ವೀಟ್ ಮಾಡಿದ್ದಾರೆ.
ಅಧಿಕಾರದ ಲಾಲಸೆಯಿಂದ ಕಾಂಗ್ರೆಸ್ಗೆ ಜಿಗಿದ ಸಿದ್ದರಾಮಯ್ಯ ಅವರು ಜೆಡಿಎಸ್ ಅವಕಾಶವಾದಿ ಪಕ್ಷ ಎನ್ನುವ ಮೂಲಕ ತಮ್ಮ ಊಸರವಳ್ಳಿ ರಾಜಕಾರಣದ ನಿಜಬಣ್ಣ ಬಯಲು ಮಾಡಿಕೊಂಡಿದ್ದಾರೆ.
ಜೆಡಿಎಸ್ ಪಕ್ಷದಲ್ಲಿದ್ದಾಗ ಅಧಿಕಾರ, ಸ್ಥಾನ-ಮಾನಗಳನ್ನು ಅನುಭವಿಸಿ ತಮ್ಮ ಬೆಂಬಲಿಗರೊಂದಿಗೆ ಗಂಟು ಮೂಟೆ ಕಟ್ಟಿಕೊಂಡು ಅಧಿಕಾರದ ಆಸೆಗಾಗಿ, ಅವಕಾಶವಾದಿ ಹಾದಿ ಹಿಡಿದ ಕೃತಘ್ನಗೇಡಿತನದ ಸಿದ್ದರಾಮಯ್ಯ ಅವರಿಂದ ನಮ್ಮ ಪಕ್ಷ ಸ್ವಾಭಿಮಾನದ ಪಾಠ ಕಲಿಯಬೇಕಿಲ್ಲ. ನಿಮ್ಮ ಸ್ವಾಭಿಮಾನದ ಪ್ರಲಾಪ ಮಠದೊಳಗಿನ ಬೆಕ್ಕಿನ ಮುಖವಾಡದಂತಿದೆ.
ನೀವು ಎಂತಹ ಸ್ವಾರ್ಥಿ ಮತ್ತು ಎಡಬಿಡಂಗಿತನದ ರಾಜಕಾರಣಿ ಎಂಬುದು ಇಡೀ ನಾಡಿಗೆ ಗೊತ್ತಿದೆ.
ಪಕ್ಷಾಂತರ ಮಾಡಿ ಅಧಿಕಾರ ಹಿಡಿದ ನೀವು ಆ ಪಕ್ಷದಲ್ಲಿ ಬಿತ್ತಿದ ಬೆಳೆ ಮತ್ತು ಕಳೆ ಏನೆಂಬುದನ್ನು ನಿಮ್ಮನ್ನು ಆಲಿಂಗಿಸಿಕೊಂಡ ಪಕ್ಷದವರು ಈಗ ಅನುಭವಿಸುತ್ತಿದ್ದಾರೆ.
ನಿಮ್ಮ ಸ್ವಾರ್ಥ ರಾಜಕಾರಣದ ಕುಟಿಲ ತಂತ್ರಗಳನ್ನು ಮರೆಮಾಚಿಕೊಳ್ಳಲು ಬೆಳೆದ ಪಕ್ಷಕ್ಕೆ ಮಗ್ಗುಲಲ್ಲಿ ಇದ್ದು ಬಾಕು ಹಾಕಿದವರ ಮಾರ್ಜಾಲ ಉಪದೇಶ ಯಾರಿಗೆ ಸಹ್ಯವಾದೀತು? ತನುವಿನೊಳು ಕಪಟ, ಮನದೊಳು ಮರ್ಕಟ, ಆಚಾರ ಲಿಂಗವ ಭಂಗಗೊಳಿಸಿ, ಸಂಗ ಕೇಳಿಯ ಮನದ, ಮುಂದಣ ಆಸೆಯ ಮತಿಗೇಡಿ, ನೀನು ಶರಣನೆಂದು ಕೊಂಡೊಡೆ ಲಿಂಗ ಜಂಗಮ ಕೂಡಲ ಸಂಗನು ಮುನಿದುತಲೆ ಹೋಳಾದೀತು ಎಂದು ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.