ಮುಡಾ ಗೆಬ್ಬೆದ್ದು ಹೋಗಿದೆ: ಕ್ಲೀನ್ ಮಾಡುತ್ತೇನೆ -ಸಿದ್ದರಾಮಯ್ಯ

ಮೈಸೂರು: ಮುಡಾ ಗೆಬ್ಬೆದ್ದು ಹೋಗಿದೆ ಹೀಗೆಂದು ಶರಾ ಬರೆದವರು ಸ್ವತಃ ಮುಖ್ಯ ಮಂತ್ರಿ ಸಿದ್ದರಾಮಯ್ಯ.

ಮೈಸೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ‌ ಮಾತನಾಡುವ ವೇಳೆ ಮುಡಾ ಹಗರಣಕ್ಕೆ ಪ್ರತಿಕ್ರಿಯಿಸಿ ಮುಡಾ ಗೆಬ್ಬೆದ್ದು ಹೋಗಿದೆ ಅದನ್ನ ಕ್ಲೀನ್ ಮಾಡುವ ಕೆಲಸ ಮಾಡುತ್ತೇನೆ ಎಂದು ಕಡಾ ಖಂಡಿತವಾಗಿ ಹೇಳಿದರು.

ಮುಡಾ ಹಗರಣದ ಬಗ್ಗೆ ಇಬ್ಬರು ಐಎಎಸ್ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ‌. ತನಿಖಾ ವರದಿ ಬಂದ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇನೆ,ನಮ್ಮ ಕಾಲದಲ್ಲೂ ತಪ್ಪುಗಳು ಆಗಿದೆ,ಇಲ್ಲಾ ಎನ್ನಲಾಗದು,ಆದರೆ ಬಿಜೆಪಿ ಕಾಲದಲ್ಲೇ ಹೆಚ್ಚು ತಪ್ಪಾಗಿರುವುದು,ಅದನ್ನ ಸರಿಪಡಿಸುತ್ತೇನೆ ಎಂದು ಹೋರಾಟಕ್ಕೆ ಸಜ್ಜಾಗಿರುವ ಬಿಜೆಪಿಗರಿಗೆ ತಿರುಗೇಟು ನೀಡಿದರು ಸಿಎಂ.

ನಮ್ಮ ಪತ್ನಿಗೆ ಸೈಟ್ ಕೊಟ್ಟಿರುವ ವಿಚಾರ ಇಟ್ಟುಕೊಂಡು ಬೇರೆ ಅಕ್ರಮ ಮಾಡಲು ಸಾಧ್ಯವಿಲ್ಲ, ನಮ್ಮದು ಅಕ್ರಮವೂ ಅಲ್ಲ, ಆ ಪ್ರಕರಣವೇ ಬೇರೆ, ಈಗ ನಡೆದಿರುವ ಪ್ರಕರಣಗಳೇ ಬೇರೆ ಎಂದು ಸ್ಪಷ್ಟಪಡಿಸಿದರು

ಒಬ್ಬ ಹಿಂದುಳಿದ ವರ್ಗದ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗಿಬಿಟ್ಟನಲ್ಲಾ ಎಂದು ಕೆಲವರಿಗೆ ಸಹಿಸಲು ಆಗುತ್ತಿಲ್ಲ ಎಂದು ಸಿಎಂ ಟಾಂಗ್‌ ನೀಡಿದರು.

ಹೊಟ್ಟೆಕಿಚ್ಚಿನಿಂದ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ ಮೇಲೆ ಆರೋಪ ಮಾಡಲು ಬೇರೆ ಏನೂ ಇಲ್ಲವಲ್ಲಾ ಹಾಗಾಗಿ ಕಾನೂನಾತ್ಮಕವಾಗಿ ನಡೆದಿರುವ ವಿಚಾರವನ್ನ ಅಕ್ರಮ ಎಂದು ಬಿಂಬಿಸುವ ಯತ್ನ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ನಾನು ಹೆದರುತ್ತೀನಾ ಇದರಿಂದ ನನ್ನನ್ನು ಹೆದರಿಸಲು ಸಾಧ್ಯನಾ ಎಂದು ಸಿದ್ದು ಪ್ರಶ್ನಿಸಿದರು.