ಬೆಂಗಳೂರು: ಕನ್ನಡಿಗರ ಮನಗೆದ್ದಿದ್ದ ನಿರೂಪಕಿ ಅಪರ್ಣಾ ಚಿರನಿದ್ರೆಗೆ ಜಾರಿದ್ದು, ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಶುಕ್ರವಾರ ನೆರವೇರಿತು.
ಬೆಂಗಳೂರಿನ ಬನಶಂಕರಿಯಲ್ಲಿರುವ ಅಪರ್ಣಾ ಸ್ವಗೃಹದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಹೊಯ್ಸಳ ಕರ್ನಾಟಕ ಆಚರಣೆಯಂತೆ ವಿಧಿ ವಿಧಾನ ನಡೆಯಿತು.
ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಪರ್ಣಾ ಅವರು ಗುರುವಾರ ಸಂಜೆ ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
ಬೆಂಗಳೂರು ದೂರದರ್ಶನದಲ್ಲಿ ಸೀನಿಯರ್ ಗ್ರೇಡ್ ನಿರೂಪಕಿಯಾಗಿದ್ದ ಅಪರ್ಣಾ, ಆಕಾಶವಾಣಿ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದರು, ಕನ್ನಡದ ಯಶಸ್ವಿ ನಿರೂಪಕಿಯಾಗಿ 3 ದಶಕಗಳನ್ನು ಅಪರ್ಣಪೂರೈಸಿದ್ದಾರೆ.
ಕಿರುತೆರೆಯಲ್ಲಿ ‘ಮೂಡಲಮನೆ, ‘ಮುಕ್ತ’ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಅಪರ್ಣಾ, 2013ರಲ್ಲಿ ಬಿಗ್‌ಬಾಸ್ ಕನ್ನಡದ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದರು.
2015ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ ‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿ ಕನ್ನಡ ಕಲಾಪ್ರಿಯರ ಮನಗೆದ್ದಿದ್ದರು ಅಪರ್ಣಾ.
2014 ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಘೋಷಣೆಯಾಗುವ ‘ಪ್ರಯಾಣಿಕರು ಹತ್ತುವ ಮತ್ತು ಇಳಿಯುವ ಸೂಚನೆ’ಗೆ ಅಪರ್ಣಾ ಧ್ವನಿ ಗೂಡಿಸಿದ್ದರು.
ಅಪರ್ಣಾರ ನಿಧನಕ್ಕೆ ಚಿತ್ರರಂಗ ಕಂಬನ ಮಿಡಿದಿದೆ.