ನವದೆಹಲಿ: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಡಿಸಿಎಂ ಡಿ.ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಎಸ್‌ಸಿ ಶರ್ಮಾ ಅವರ ಪೀಠವು ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.
ಸಿಬಿಐ ದಾಖಲಿಸಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಡಿ.ಕೆ.ಶಿವಕುಮಾರ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅಕ್ಟೋಬರ್ 19, 2023 ರಂದು ಕರ್ನಾಟಕ ಹೈಕೋರ್ಟ್ ಡಿಕೆಶಿ ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಡಿಕೆಶಿ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
2017ರಲ್ಲಿ ಆದಾಯ ತೆರಿಗೆ ಇಲಾಖೆ ಡಿ.ಕೆ ಶಿವಕುಮಾರ್ ಮೇಲೆ ದಾಳಿ ನಡೆಸಿತ್ತು. ಐಟಿ ಇಲಾಖೆ ನೀಡಿದ ಮಾಹಿತಿ ಆಧರಿಸಿ ಜಾರಿ ನಿರ್ದೇಶನಾಲಯ ಡಿಕೆಶಿ ವಿರುದ್ಧ ತನಿಖೆ ಆರಂಭಿಸಿತ್ತು.
ಇಡಿ ತನಿಖೆಯನ್ನು ಆಧರಿಸಿ ಡಿಕೆಶಿ ವಿರುದ್ಧ ಎಫ್‌ಐಆರ್ ದಾಖಲಿಸಲು ಸಿಬಿಐ ರಾಜ್ಯ ಸರ್ಕಾರದಿಂದ ಅನುಮತಿ ಕೋರಿತ್ತು. ಸರ್ಕಾರ 2019ರ ಸೆ.25ರಂದು ಅನುಮತಿ ನೀಡಿದ ಬೆನ್ನಲ್ಲೇ 2020ರ ಅಕ್ಟೋಬರ್ 3 ರಂದು ಡಿ.ಕೆ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಡಿಕೆಶಿ ಹೈಕೋರ್ಟ್, ಸುಪ್ರೀಂ ಮೊರೆ ಹೋಗಿದ್ದರು.
ಡಿ.ಕೆ ಶಿವಕುಮಾರ್ ಅವರು 2013 ಮತ್ತು 2018 ರ ನಡುವೆ ತಮ್ಮ ಆದಾಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿಯನ್ನು ಗಳಿಸಿದ್ದಾರೆ,ಈ ಅವಧಿಯಲ್ಲಿ ಅವರು ಸಚಿವರಾಗಿದ್ದರು ಎಂದು ಸಿಬಿಐ ಆರೋಪಿಸಿದೆ.
ಇದೀಗ ಸುಪ್ರೀಂ ಕೋರ್ಟ್ ನಲ್ಲೂ ಡಿಕೆಶಿಗೆ ಹಿನ್ನಡೆಯಾದಂತಾಗಿದೆ.