ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸಚಿವರುಗಳ ವಾಗ್ದಾಳಿ

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದಲ್ಲಿ ರಾಜ್ಯ ಸರ್ಕಾರದ ಪ್ರಮುಖರನ್ನು ಸಿಲುಕಿಸಲು ಇಡಿ ಮೂಲಕ ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಸಚಿವರು ಗಂಭೀರ ಆರೋಪ ಮಾಡಿದರು.

ವಾಲ್ಮೀಕಿ ಹಗರಣದಲ್ಲಿ ಸರ್ಕಾರದ ಉನ್ನತ ಮಟ್ಟದ ವ್ಯಕ್ತಿಗಳ ಹೆಸರು ಹೇಳಲು ಬಂಧಿತರಿಗೆ ಇಡಿ ಒತ್ತಡ ಹೇರುತ್ತಿದೆ ಎಂದು ರಾಜ್ಯ ಸರ್ಕಾರದ ಪ್ರಮುಖ ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣ ಬೈರೇ ಗೌಡ, ಪ್ರಿಯಾಂಕ್ ಖರ್ಗೆ,ಕೆ.ಜೆ.ಜಾರ್ಜ್,
ಸಂತೋಷ್ ಲಾಡ್ ಜಂಟಿ ಸುದ್ದಿಗೋಷ್ಠಿ ಕರೆದು ಆರೋಪಿಸಿದ್ದಾರೆ.

ಕೃಷ್ಣ ಬೈರೇಗೌಡ ಮಾತನಾಡಿ,ವಾಲ್ಮೀಕಿ ನಿಗಮದ ಹಗರಣದಲ್ಲಿ ಸರ್ಕಾರದ ಉನ್ನತ ಮಟ್ಟದ ವ್ಯಕ್ತಿಗಳ ಹೆಸರು ಹೇಳಲು ಬಂಧಿತರಿಗೆ ಇಡಿ ಒತ್ತಡ ಹೇರುತ್ತಿದೆ, ವಿರೋಧ ಪಕ್ಷಗಳ ಮೇಲೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ಮೂಲಕ ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿದೆ ಎಂದು ದೂರಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದಿರುವ ಹಗರಣಗಳ ಬಗ್ಗೆ ಯಾಕೆ ತನಿಖೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದರು.

ಭೂಮಿ ನಿಗಮ, ಅಂಬೇಡ್ಕರ್ ನಿಗಮದಲ್ಲಿ ನಡೆದ ಹಗರಣ, ಕೋವಿಡ್ ಅಕ್ರಮದ ಬಗ್ಗೆ ಏಕೆ ತನಿಖೆ ಮಾಡಿಲ್ಲ, ವಿರೋಧ ಪಕ್ಷದಲ್ಲಿ ಇದ್ದಾಗ ಕೇಸ್ ಹಾಕ್ತಾರೆ, ಬಿಜೆಪಿಗೆ ಬಂದರೆ ಅವರಿಗೆ ಕ್ಲೀನ್ ಚಿಟ್ ನೀಡಲಾಗುತ್ತೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ ವಾಮಮಾರ್ಗಗಳನ್ನು ಬಳಸಿ ಏಕ ಪಕ್ಷ ಸಾಮ್ರಾಜ್ಯವನ್ನು ದೇಶದಲ್ಲಿ ಕಟ್ಟಲು ಯತ್ನಿಸಿದೆ ಎಂದು ಟೀಕಿಸಿದರು.

ಐಟಿ ಇಡಿ, ಸಿಬಿಐ ಬಳಕೆ ಮಾಡಿಕೊಂಡು ಸರ್ಜಿಕಲ್ ಸ್ಟ್ರೈಕ್ ರೀತಿಯಲ್ಲಿ ವಿರೋಧ ಪಕ್ಷದ ಮೇಲೆ ದಾಳಿ ಮಾಡುತ್ತಿದೆ. ಇಡಿ ಬಳಕೆ ಮಾಡಿಕೊಂಡು ಕಾಂಗ್ರೆಸ್ ಸರ್ಕಾರವನ್ನು ಬುಡಮೇಲು ‌ಮಾಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ.

ವಾಲ್ಮೀಕಿ ನಿಗಮದ ಹಗರಣ ತನಿಖೆ ನಡೆಸಲಾಗುತ್ತಿದೆ, ತನಿಖೆಗೆ ಒಳಪಟ್ಟವರ ಮೇಲೆ ಒತ್ತಡ ತಂದು ಸರ್ಕಾರದ ಉನ್ನತ ಮಟ್ಟದಲ್ಲಿ ಇರುವವರ ಹೆಸರು ಹೇಳಬೇಕು ಎಂದು ಇಡಿ ಒತ್ತಡ ಹೇರುತ್ತಿದೆ. ಈ ಮೂಲಕ ಚುನಾಯಿತ ಸರ್ಕಾರವನ್ನು ಬುಡಮೇಲು ಮಾಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ ಎಂದು ಸಚಿವರುಗಳು ಗಂಭೀರ ಆರೋಪ ಮಾಡಿ ದರು.

ಅವರು ಹೇಳಿದಂತೆ ಕೇಳಿದರೆ ರಕ್ಷಣೆ ‌ಮಾಡುತ್ತೇವೆ ಇಲ್ಲದೆ ಇದ್ದರೆ ಇಡಿ ಪವರ್ ತೋರಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಇಡಿಗೆ ತಪ್ಪಿತಸ್ಥರನ್ನು ಹುಡುಕುವ ಯಾವ ಉದ್ದೇಶವೇ ಇಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬುಡಮೇಲು ಮಾಡುವ ಉದ್ದೇಶ ಕೇಂದ್ರಕ್ಕೆ ಇದೆ ಎಂದು ವಾಗ್ದಾಳಿ ನಡೆಸಿದರು.

ಸಾಕ್ಷಿಗಳ ಮೇಲೆ ಇಡಿ ಹೆದರಿಸಿ, ಬೆದರಿಸಿ ಹೇಳಿಕೆ ಕೊಡಿಸಲು ಪ್ರಯತ್ನ ಮಾಡಲಾಗುತ್ತಿದೆ ಇದಕ್ಕೆ ನಾವು ಬಗ್ಗುವುದಿಲ್ಲ ಅಗತ್ಯ ಬಂದರೆ ಕಾನೂನು ಹೋರಾಟ ಮಾಡುತ್ತೇವೆ, ಬೀದಿಗಿಳಿದು ಹೋರಾಟ ಮಾಡಲೂ ಸಿದ್ದ ಎಂದು ಎಚ್ಚರಿಕೆ ನೀಡಿದರು.

ಪ್ರಿಯಾಂಕ್ ಖರ್ಗೆ ಮಾತನಾಡಿ, ಕರ್ನಾಟಕದಲ್ಲಿ ಮಹರ್ಷಿ ವಾಲ್ಮೀಕಿ ನಿಗಮದ ಹಗರಣದಲ್ಲಿ ಇಡಿ ಮತ್ತು ಸಿಬಿಐ ಹೆಚ್ಚಿನ ಆಸಕ್ತಿ ವಹಿಸಿವೆ. ಭೋವಿ ನಿಗಮ, ತಾಂಡಾ ಕಾರ್ಪೊರೇಷನ್ ಇತ್ಯಾದಿಗಳಲ್ಲಿ ಏಕೆ ಸುಮ್ಮನಿದ್ದರು, ಪ್ರತಿಪಕ್ಷದ ಜನರನ್ನು ಗುರಿಯಾಗಿಸಲು ಸಾಧ್ಯವಿರುವ ಎಲ್ಲ ತಂತ್ರಗಳನ್ನು ಇಡಿ ಬಳಸಿಕೊಳ್ಳು ತ್ತಿದೆ, ನಾವು ಕಾನೂನುಬದ್ಧವಾಗಿ ಹೋರಾಟ ಮಾಡು ತ್ತೇವೆ ಎಂದು ತಿಳಿಸಿದರು.

ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್,ಸಂತೋಷ್ ಲಾಡ್ ಕೂಡಾ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಾವು ಯಾವುದೇ ದಾಳಿಗಳಿಗೂ ಹೆದರು ವುದಿಲ್ಲ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಉಪಸ್ಥಿತರಿದ್ದರು.