ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆಯಲ್ಲಿ ತಪ್ಪು ಮಾಡಿರುವುದು ಬ್ಯಾಂಕ್ ಮ್ಯಾನೇಜರ್,ಅದಕ್ಕೆ ಸಿಎಂ ಏಕೆ ರಾಜೀನಾಮೆ ಕೊಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸಿದ್ದು ಪರ ಬ್ಯಾಟಿಂಗ್ ಮಾಡಿದ್ಧಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಗರಣಕ್ಕೂ ಸಿದ್ದರಾಮಯ್ಯನವರಿಗೂ ಏನು ಸಂಬಂಧ, ಅಧಿಕಾರಿ ತಪ್ಪು ಮಾಡಿದರೆ ಮುಖ್ಯಮಂತ್ರಿಗಳು ಹೇಗೆ ಜವಾಬ್ದಾರರಾಗುತ್ತಾರೆ ಎಂದು ಕಾರವಾಗಿ ಪ್ರಶ್ನಿಸಿದರು.
ಬ್ಯಾಂಕ್ ಅಧಿಕಾರಿ ಒಂದೇ ದಿನದಲ್ಲಿ ಆರೋಪಿಗಳಿಗೆ ಸಾಲ ಮಂಜೂರು ಮಾಡಿದ್ದಾರೆ, ಇದಕ್ಕೆ ಕೇಂದ್ರ ಹಣಕಾಸು ಸಚಿವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆಯೇ ಎಂದು ಕೇಳಿದರು.
ಪ್ರತಿಪಕ್ಷಗಳಿಗೆ ಸದನದ ಕಲಾಪಗಳ ನಡಾವಳಿ ಕುರಿತು ತಿಳುವಳಿಕೆಯಿಲ್ಲ, ಅವರಿಗೆ ನಾವು ಮಾತನಾಡಲು ಅವಕಾಶ ನೀಡಿದ್ದೇವೆ,ಅದರಂತೆ ಮುಖ್ಯಮಂತ್ರಿಗಳಿಗೆ ಮಾತನಾಡಲು ಅವಕಾಶ ನೀಡಬೇಕಿತ್ತು, ಆದರೆ ನೀಡಲಿಲ್ಲ,ಈ ವಿಚಾರದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿದ್ದು, ನಮಗೂ ರಾಜಕೀಯ ಮಾಡಲು ಬರುತ್ತದೆ ಎಂದು ತಿರುಗೇಟು ನೀಡಿದರು.
ನಾವು ಯಾವುದೇ ತಪ್ಪು ಮಾಡಿಲ್ಲ, ಸರ್ಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ, ಕೆಲವು ಅಧಿಕಾರಿಗಳು ತಪ್ಪು ಮಾಡಿದ್ದು, ಇದನ್ನು ರಾಜಕೀಯವಾಗಿ ನಮ್ಮ ವಿರುದ್ಧ ಬಳಸಿಕೊಳ್ಳುತ್ತಿದ್ದಾರೆ ಎಂದು ಡಿಕೆಶಿ ದೂರಿದರು.
ಎಸ್ಐಟಿ ರಚಿಸಿದ್ದೇವೆ, ಇಡಿ, ಸಿಬಿಐನಿಂದ ತನಿಖೆ ನಡೆಸಲಾಗುತ್ತಿದೆ. ದೊಡ್ಡ ಕಾರ್ಪೊರೇಟ್ ಕಂಪನಿಯಲ್ಲಿ ಯಾರೋ ನೌಕರ ತಪ್ಪು ಮಾಡುತ್ತಾನೆ, ಅದಕ್ಕೆ ಕಂಪನಿಯ ಮುಖ್ಯಸ್ಥನನ್ನೇ ಗುರಿ ಮಾಡಲು ಆಗುತ್ತದೆಯೇ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.