ಹಾಸನ: ಒಕ್ಕಲಿಗರ ನಿಗಮ, ಬ್ರಾಹ್ಮಣರು, ಲಿಂಗಾಯಿತರು ನಿಗಮದ ಹಣ ಇದೆ ಎಲ್ಲವನ್ನೂ ಬಳಸಿಕೊಳ್ಳಿ ಎಂದು ಹೇಳಿದ್ದೇನೆ ಎಂಬುದಾಗಿ
ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿರುವ ಪ್ರದೇಶಕ್ಕೆ ಭೇಟಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅಶೋಕ್ ಮಾತನಾಡಿದರು.
ಸರ್ಕಾರ ಹಗರಣಗಳಲ್ಲಿ ಸಿಲುಕಿಕೊಂಡಿದೆ, ಅದರಿಂದ ಹೊರಬರಲು ಅವರಿಗೆ ಆಗುತ್ತಿಲ್ಲಾ, ನಾನು ಕಂದಾಯ ಸಚಿವನಾಗಿದ್ದಾಗ ಮಳೆಹಾನಿಗೆ ತುರ್ತು ಪರಿಹಾರ ನೀಡಿದ್ದೆ. ಇಲ್ಲಿ ಪರಿಹಾರ ಕೊಡಲು ಇನ್ನೂ ಪ್ರಾರಂಭಾನೆ ಮಾಡಿಲ್ಲ ಎಂದು ಕುಟುಕಿದರು.
ಕೇಂದ್ರ ಸರ್ಕಾರ ಕೊಟ್ಟಿರುವ ಹಣವನ್ನು ಇವರು ಕೊಡುತ್ತಿದ್ದಾರೆ,ಹಾಗೆಂದು ಕೈಚೆಲ್ಲಿ ಕೂರಬಾರದು. ರಾಜ್ಯ ಸರ್ಕಾರ ಕೇಂದ್ರದ ಹಣಕ್ಕೆ ಹೆಚ್ಚಿನ ಹಣ ಹಾಕಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ. ಸರ್ಕಾರ ಪಾಪರ್ ಆಗಿದೆ, ಕಳೆದ ಆರೇಳು ತಿಂಗಳಿನಿಂದ ಅದೇ ಸ್ಥಿತಿಯಲ್ಲಿದೆ. ಈಗ ಗ್ಯಾರೆಂಟಿಗಾಗಿ ಟ್ಯಾಕ್ಸ್ ಹಾಕುತ್ತಿದ್ದಾರೆ. ದಲಿತರ ಹಣ ಉಪಯೋಗಿಸಿಕೊಂಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಹಿಂದುಳಿದ ನಾಯಕನಾಗಿದ್ದ ಸಿದ್ದರಾಮಯ್ಯಗೆ ಮಾತನಾಡಲು ಬಿಡುತ್ತಿಲ್ಲ ಎಂಬ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮಾತನಾಡಬೇಕಾದರೆ ಡೆತ್‌ನೋಟ್‌ನ್ನು ಓದಿದ್ರು. ಅದರಲ್ಲಿ ಸಚಿವರು, ಎಂಎಲ್‌ಎ, ವಾಲ್ಮೀಕಿ ನಿಗಮದ ಅಧ್ಯಕ್ಷರ ಹೆಸರನ್ನು ಬಿಟ್ಟು ಓದುತ್ತಾರೆ. ಜನರಿಗೆ ತಪ್ಪು ಮಾಹಿತಿ ಹೋಗಬಾರದು, ಅದನ್ನು ಓದಿ,ಯಾರೂ ಭಾಗಿಯಾಗಿಲ್ಲ, ಅಧಿಕಾರಿಗಳೇ ಎಲ್ಲಾ ತಿಂದು ಹಾಕಿದ್ದಾರೆ ಅಂತ ಹೇಳಿದ್ದಾರೆ. 187 ಕೋಟಿ ಅಧಿಕಾರಿಗಳೇ ತಿನ್ನಲು ಆಗುತ್ತಾ, ಅದರ ಹಿಂದೆ ದೊಡ್ಡ ತಿಮಿಂಗಿಲಗಳೇ ಇರುವುದರಿಂದ ತಿಂದಿದ್ದಾರೆ. ಅಧಿಕಾರಿಗಳು ಅಲ್ಲಿ ಇಲ್ಲಿ ಬಿದ್ದಿದ್ದನ್ನು ತಿಂದಿದ್ದಾರೆ ಅಷ್ಟೇ ಎಂದು ಟೀಕಾಪ್ರಹಾರ ನಡೆಸಿದರು.
ಹೆಚ್‌ಡಿಕೆ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದರೆ ಏನೂ ಪ್ರಯೋಜನವಿಲ್ಲ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್ ಬಂದರೆ ಪ್ರಯೋಜನ ಆಗುತ್ತೆ ಅಂದರೆ ಅವರು ಮನೆ ಬಿಟ್ಟು ಬರಬೇಕು ಎಂದು ಅಶೊಕ್ ಆಗ್ರಹಿಸಿದರು.
ನೀವು ಕೊಡುತ್ತಿರುವುದು ಎನ್‌ಡಿಆರ್‌ಎಫ್ ಹಣ, ನೀವು ನಯಾಪೈಸೆ ಕೊಟ್ಟಿಲ್ಲ. ಕುಮಾರಸ್ವಾಮಿ ಬರಲು ರೈಟ್ಸ್ ಇದೆ, ಕೇಳಲು ರೈಟ್ಸ್ ಇದೆ. ಕುಮಾರಸ್ವಾಮಿ ಕೇಂದ್ರ ಮಂತ್ರಿ, ರಾಷ್ಟ್ರೀಯ ಹೆದ್ದಾರಿ ಕೇಂದ್ರಕ್ಕೆ ಸೇರುತ್ತೆ. ಎಲ್ಲರೂ ಒಕ್ಕೂಟದ ವ್ಯವಸ್ಥೆಯಲ್ಲಿದ್ದೀರಿ. ಕುಮಾರಸ್ವಾಮಿ ಅವರಿಗೆ ಕೈಯಲ್ಲಿ ಆಗಲ್ಲ ಅಂದರೆ ನೀವು ಬಂದು ಕೆಲಸ ಮಾಡಿ ಎಂದು ತಾಕೀತು ಮಾಡಿದರು.