ಬೆಂಗಳೂರು: ಪಾದಯಾತ್ರೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗಲೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಮೂಗಿನಲ್ಲಿ ರಕ್ತಸ್ರಾವವಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ವಾಲ್ಮೀಕಿ, ಮುಡಾ ಹಗರಣದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಪಾದಯಾತ್ರೆ ಮಾಡಲು ತೀರ್ಮಾನ ಮಾಡಲಾಗಿದ್ದು ಈ ಕುರಿತು ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಮಾತನಾಡುತ್ತಿದ್ದರು.
ಮಾತನಾಡುತ್ತಿದ್ದಾಗಲೇ ಅವರ ಮೂಗಿನಲ್ಲಿ ಒಂದೇ ಸಮನೆ ರಕ್ತ ಸುರಿಯಲಾರಂಭಿಸಿತು.
ಆಗ ಪಕ್ಕದಲ್ಲೇ ಕುಳಿತಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಗಮನಿಸಿ ಗಾಬರಿಗೊಂಡರು.
ಸಮೀಪದಲ್ಲೇ ಇದ್ದ ಕುಮಾರಸ್ವಾಮಿ ಅವರ ಬೆಂಬಲಿಗರು ರಕ್ತ ಸ್ರಾವವಾಗುತ್ತಿರುವುದನ್ನು ಕಂಡು ತಕ್ಷಣವೇ ಅವರಿಗೆ ಟವಲ್ ನೀಡಿದ್ದಾರೆ.
ಕುಮಾರಸ್ವಾಮಿ ಅವರು ಟವಲ್ ನಿಂದ ಮೂಗು ಒರಸಿಕೊಂಡು ಮತ್ತೆ ಮಾತನಾಡಲು ಮುಂದಾದಾಗ ಹೆಚ್ಚು ರಕ್ತಸ್ರಾವವಾಗಿದೆ.
ತಕ್ಷಣವೇ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಖಾಸಗಿ ಹೊಟೇಲ್ ನಿಂದ ಕುಮಾರಸ್ವಾಮಿ ಅವರನ್ನು ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತಿತರರು ಜಯನಗರ ಅಪೋಲೋ ಆಸ್ಪತ್ರೆಗೆ ದಾಖಲಿಸಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಭಯ ಪಡುವ ಅಗತ್ಯವಿಲ್ಲ ಎಂದು ಅಪೋಲೊ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ ಎಂದು ನಿಖಿಲ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.